ಬೆಂಗಳೂರು: ರಾಜ್ಯದಲ್ಲಿ ವಿಧಾನಪರಿಷತ್ತಿನ ಚುನಾವಣೆ ಘೋಷಣೆಯಾಗಿದೆ. ವಿಧಾನಸಭೆಯಿಂದ ವಿಧಾನ ಪರಿಷತ್ತಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಲಾಗಿದೆ. ಸಿಎಂ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯಗೂ ಟಿಕೆಟ್ ನೀಡಲಾಗಿದೆ.
ಈಗಾಗಲೇ ಬಿಜೆಪಿಯಿಂದ ವಿಧಾನಪರಿಷತ್ತಿನ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಿಟಿ ರವಿ, ಎನ್ ರವಿಕುಮಾರ್ ಹಾಗೂ ಎಂ.ಜಿ ಮುಳೆಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಚುನಾಯಿತರಾಗಲು ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ.
ಈ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಿಂದಲೂ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಕಾಂಗ್ರೆಸ್ ಪಕ್ಷದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯ, ಎನ್ ಎಸ್ ಬೋಸರಾಜು, ಡಾ.ಕೆ ಗೋವಿಂದರಾಜು, ವಸಂತ್ ಕುಮಾರ್, ಜಗದೇವ ಗುತ್ತೇದಾರ, ಐವಾನ್ ಡಿಸೋಜಗೆ ಟಿಕೆಟ್ ನೀಡಲಾಗಿದೆ.
ಇನ್ನೂ ಬಿಜೆಪಿ ಪಕ್ಷಕ್ಕೆ ಹೋದಂತ ಜಗದೀಶ್ ಶೆಟ್ಟರ್ ತೆರವಾದಂತ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿತ್ತು. ಈ ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಬಸನಗೌಡ ಬಾರ್ದಲಿ ಅವರಿಗೆ ಟಿಕೆಟ್ ಹಂಚಿಕೆ ಮಾಡಲಾಗಿದೆ. ಈ ಮೂಲಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ 7 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ.