ಮಡಿಕೇರಿ : ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ವರ್ಗೀಕರಣ ಕುರಿತು ಮೇ, 05 ರಿಂದ ನಡೆಯುವ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಸಂಬಂಧ ಸಮೀಕ್ಷೆ ಗಣತಿದಾರರಿಗೆ(ಶಿಕ್ಷಕರಿಗೆ) ತರಬೇತಿ ಕಾರ್ಯಾಗಾರವು ನಗರದ ಸಂತ ಜೋಸೆಫರ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆಯಿತು.
ಮಡಿಕೇರಿ ತಾಲ್ಲೂಕಿಗೆ ಸಂಬಂಧಪಟ್ಟಂತೆ ನಡೆದ ತರಬೇತಿಯಲ್ಲಿ 170 ಶಿಕ್ಷಕರು ಪಾಲ್ಗೊಂಡು ಮಾಹಿತಿ ಪಡೆದರು.
ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೇಗೌಡ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಮಾಸ್ಟರ್ ಟ್ರೈನರ್‍ಗಳಾದ ಪ್ರಶಾಂತ್ ಕುಮಾರ್, ಭಾರತಿ, ಜೊತೆಗೆ 13 ಮಂದಿ ಮೇಲ್ವಿಚಾರಕರು ಇದ್ದರು.
ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣ ಸಂಬಂದ ನ್ಯಾಯಮೂರ್ತಿ ಡಾ.ಎಚ್.ಎನ್.ನಾಗಮೋಹನದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯನ್ನು ನಡೆಸುತ್ತಿದ್ದು, ಈ ಸಂಬಂಧ ಸಮೀಕ್ಷೆಗೆ ನಿಯೋಜಿಸಿರುವ ಶಿಕ್ಷಕರು/ ಗಣತಿದಾರರು ಪರಿಶಿಷ್ಟ ಜಾತಿ ಕುಟುಂಬಗಳು ಹೇಳುವ ಮಾಹಿತಿಯನ್ನು ಮೊಬೈಲ್ ಆಪ್ ಮೂಲಕ ಭರ್ತಿ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶೇಖರ್ ಅವರು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ರಂಗಧಾಮಪ್ಪ ಅವರು ಮಾತನಾಡಿ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ಸಂಬಂಧ ಸರ್ಕಾರದ ನಿರ್ದೇಶನವನ್ನು ಚಾಚೂ ತಪ್ಪದೇ ಪಾಲಿಸಬೇಕು. ಯಾವುದೇ ರೀತಿಯ ಸಂಶಗಳಿಗೆ ಅವಕಾಶ ಮಾಡಬಾರದು ಎಂದು ಅವರು ಸಲಹೆ ಮಾಡಿದರು.
ಮತ್ತಷ್ಟು ಮಾಹಿತಿ: ಸಮೀಕ್ಷೆದಾರರ ಪ್ರಾಮುಖ್ಯತೆ: ಸಮೀಕ್ಷೆದಾರನಾಗಿ ಆಯ್ಕೆಗೊಂಡಿರುವುದು ಶಿಕ್ಷಕರು ಸಮೀಕ್ಷೆದಾರರಾಗಿ ಮಹತ್ವದ ಕರ್ತವ್ಯ ನಿರ್ವಹಿಸಬೇಕಿದೆ.
ಸಮೀಕ್ಷೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿವೆ. ಸಮೀಕ್ಷೆದಾರರು ನಿಷ್ಠೆಯಿಂದ ಸಕ್ರಿಯವಾಗಿ ಭಾಗವಹಿಸಿ ಸಮೀಕ್ಷೆ ಪೂರ್ಣಗೊಳಿಸಬೇಕಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳುವ ಮೊದಲು ತಮಗೆ ವಹಿಸಿದ ಪ್ರದೇಶದಲ್ಲಿನ ಹಿರಿಯ ಮತ್ತು ಪ್ರಮುಖ ವ್ಯಕ್ತಿಗಳನ್ನು ಭೇಟಿ ಮಾಡಿ ಭೇಟಿಯ ಉದ್ದೇಶವನ್ನು ನಿವಾಸಿಗಳಿಗೆ ವಿವರಿಸುವ ಮೂಲಕ ಅವರೊಂದಿಗೆ ನಿಕಟ ಸೌಹಾರ್ದತೆ ಹೊಂದಬೇಕು.
ಸಮೀಕ್ಷೆ ಕಾರ್ಯಕ್ಕೆ ಹೋಗುವ ಎಲ್ಲ ಸಮಯದಲ್ಲಿ ಗುರುತಿನ ಚೀಟಿಯನ್ನು ಕೊರಳಲ್ಲಿ ತಪ್ಪದೇ ಧರಿಸಿರಬೇಕು. ಯಾವುದೇ ಕುಟುಂಬವನ್ನು ಸಂದರ್ಶಿಸಿ, ಪ್ರಶ್ನಾವಳಿಯಲ್ಲಿನ ಪ್ರಶ್ನೆಗಳನ್ನು ಕೇಳುವಾಗ ಅವಸರ ಮಾಡಬೇಡಿ. ಯಾವಾಗಲೂ ನಗುಮುಖದೊಡನೆ ಮತ್ತು ಸೌಜನ್ಯ ಪೂರ್ವಕವಾಗಿ, ನಿಮ್ಮ ಭೇಟಿಯ ಉದ್ದೇಶವನ್ನು ಮನೆಯ ಸದಸ್ಯರಿಗೆ ಸಂಕ್ಷಿಪ್ತವಾಗಿ ವಿವರಿಸಿ ನಿಮ್ಮ ಕಿರು ಪರಿಚಯದೊಡನೆ ಮುಂದುವರೆಯಿರಿ. ಸ್ನೇಹಪೂರ್ವಕ ಮತ್ತು ವಿವೇಚನಾಯುತ ನಡೆನುಡಿಗಳು ಹಾಗೂ ವಿನಯಪೂರ್ವಕವಾಗಿ ಆಡಿದ ಕೆಲವು ಒಳ್ಳೆಯ ಮಾತುಗಳು ಕುಟುಂಬ ಸದಸ್ಯರಿಗೆ ನಿರಾಳತೆಯನ್ನು ನೀಡಿ, ಅವರು ಸರಿಯಾದ ಉತ್ತರ ನೀಡಲು ಅನುಕೂಲವಾಗುತ್ತದೆ.
ಸೂಚನಾ ಕೈಪಿಡಿಯು ಮೊಬೈಲ್ ಆಪ್‍ನಲ್ಲಿ ಸಮೀಕ್ಷೆಯಲ್ಲಿನ ಮಾಹಿತಿ ತುಂಬುವ ಕುರಿತು ನೀಡಿರುವ ವಿಸ್ತøತ ಮಾರ್ಗದರ್ಶಿಯಾಗಿದೆ. ಸಮೀಕ್ಷೆಗೆ ಸಂಬಂಧಿಸಿದ ನಮೂನೆಗಳನ್ನು ಭರ್ತಿ ಮಾಡುವಾಗ ಸಾಮಾನ್ಯವಾಗಿ ಉದ್ಭವವಾಗಬಹುದಾದ ಎಲ್ಲಾ ಸಮಸ್ಯೆಗಳ ಬಗ್ಗೆಯೂ ವಿವರ ನೀಡಲು ಸಾಕಷ್ಟು ಪ್ರಯತ್ನ ಮಾಡಲಾಗಿದೆ. ಯಾವುದೇ ರೀತಿಯ ಸಂದೇಹ ನಿವಾರಣೆಗಾಗಿ ನಿಮ್ಮ ಮೇಲ್ವಿಚಾರಕರು ಅಥವಾ ಸಂಪನ್ಮೂಲ ವ್ಯಕ್ತಿ ಸಂಪರ್ಕಿಸಬಹುದು. ತರಬೇತಿಗೆ ಹಾಜರಾದಾಗ ಅವರ ಮೊಬೈಲ್ ಸಂಖ್ಯೆ ಪಡೆದುಕೊಳ್ಳಲು ಮರೆಯಬೇಡಿ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಸಮಯದಲ್ಲಿ ಸಮೀಕ್ಷೆದಾರರ ಪಾತ್ರ ಮತ್ತು ಜವಾಬ್ದಾರಿಗಳು: ಮೊಬೈಲ್ ಆಪ್ ನಲ್ಲಿಯ ಅಂಶ/ ಕಾಲಂಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಭರ್ತಿ ಮಾಡುವ ಬಗ್ಗೆ ಈ ಕೈಪಿಡಿಯಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದೆ. ಈ ಸೂಚನೆಗಳ ಪರಿಚಯವನ್ನು ಮಾಡಿಕೊಳ್ಳುವುದು ಅತ್ಯಾವಶ್ಯಕ. ಸೂಚನೆಗಳನ್ನು ಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ತಿಳಿದುಕೊಂಡ ಮೇಲೆ ಕುಟುಂಬದ ಅನುಸೂಚಿಯನ್ನು ನೈಜವಾಗಿ ಹಾಗೂ ಪ್ರಾಮಾಣಿಕವಾಗಿ ಭರ್ತಿ ಮಾಡುವುದರ ಮೇಲೆ ಸಮೀಕ್ಷೆಯ ಯಶಸ್ಸು ಅವಲಂಬಿಸಿದೆ. ತರಬೇತಿ ಸಮಯದಲ್ಲಿ ಅನುಮಾನಗಳು ಇದ್ದರೆ, ತರಬೇತಿ ಶಿಬಿರದಲ್ಲಿ ತರಬೇತುದಾರರಿಂದ ವಿವರಣೆಯನ್ನು ಪಡೆಯಲು ಹಿಂಜರಿಯಬೇಡಿ.
ಸಮೀಕ್ಷಾ ಸಮಯದಲ್ಲಿನ ಕರ್ತವ್ಯಗಳು: ಸಮೀಕ್ಷಾ ವ್ಯಾಪ್ತಿಯಲ್ಲಿರುವ ಮನೆಗಳಿಗೆ ನಿಮಗೆ ಒದಗಿಸಲಾದ ಮತದಾರರ ಪಟ್ಟಿಯಲ್ಲಿರುವ ಮನೆ ಸಂಖ್ಯೆಗಳ ಆಧಾರದ ಮೇಲೆ ಭೇಟಿ ನೀಡಬೇಕು. ಮತ್ತು ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಗುರುತಿಸಬೇಕು.
ಯಾವ ದಿನದಂದು, ಯಾವ ಯಾವ ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗುವುದು ಎಂಬ ಮಾಹಿತಿಯನ್ನು ಆದಷ್ಟು ಮಟ್ಟಿಗೆ ಮುಂಚಿತವಾಗಿಯೆ ಗ್ರಾಮಸ್ಥರಿಗೆ ತಿಳಿಸುವುದು. ಪಂಚಾಯತ್ ಅಭಿವೃದ್ದಿ ಅಧಿಕಾರಿ(ಪಿಡಿಒ), ಗ್ರಾಮದ ಗ್ರಾಮ ಲೆಕ್ಕಿಗರು, ಪಂಚಾಯತ್ ಬಿಲ್ ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತರು ಹಾಗೂ ಇತರರ ನೆರವನ್ನು ಪಡೆಯಬಹುದು.
ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯವರ ಯಾವುದೇ ಮನೆಯನ್ನು ಬಿಡದೆ, ಪ್ರತಿಯೊಂದು ಮನೆಗೆ ಭೇಟಿ ನೀಡಿ ಅಲ್ಲಿರುವ ಪ್ರತಿಯೊಂದು ಕುಟುಂಬದ ಎಲ್ಲಾ ಸದಸ್ಯರ ಮಾಹಿತಿಯನ್ನು ಮೊಬೈಲ್ ಆಪ್‍ನಲ್ಲಿ ಭರ್ತಿ ಮಾಡುವುದು.
ಸಮೀಕ್ಷೆ ನಡೆಸುವಾಗ ಸಮೀಕ್ಷೆ ಬ್ಲಾಕಿನ ಅಧಿಕೃತ ಭಾಗವಾಗಿರುವ ಯಾವುದೇ ಮನೆಯನ್ನು ಬಿಡಬಾರದು. ಒಂದು ಇಡೀ ಕುಟುಂಬವೇ ತಾತ್ಕಾಲಿಕವಾಗಿ ಲಭ್ಯವಿಲ್ಲದಿದ್ದಲ್ಲಿ (ನಿಮ್ಮ ಭೇಟಿಯ ಸಮಯದಲ್ಲಿ ಗ್ರಾಮ/ ನಗರದಲ್ಲಿ ಮಾಹಿತಿದಾರರು ಇಲ್ಲದಿದ್ದ ಕಾರಣದಿಂದ) ಸಮೀಕ್ಷೆಯ ಕಾಲಾವಧಿಯಲ್ಲಿ ಇನ್ನೊಮ್ಮೆ ಭೇಟಿ ನೀಡಿ, ಹಲವಾರು ಬಾರಿ ಭೇಟಿ ನೀಡಿದಾಗಲೂ ಮಾಹಿತಿಯನ್ನು ಸಂಗ್ರಹಿಸಲು ಸಾಧ್ಯವಾಗದಿದ್ದಲ್ಲಿ ನಿಮ್ಮ ಮೇಲ್ವಿಚಾರಕರ ಗಮನಕ್ಕೆ ತಂದು ಅವರ ಆದೇಶಾನುಸಾರ ಕ್ರಮವಹಿಸಿ.
ನೀವು ಯಾವುದೇ ಕುಟುಂಬವನ್ನು ಭೇಟಿ ಮಾಡಿದಾಗ, ಪ್ರಶ್ನಾವಳಿ ತುಂಬಲು ಆತುರಪಡಬೇಡಿ. ಯಾವಾಗಲೂ ಹಸನ್ಮುಖರಾಗಿ ನಿಮ್ಮ ಭೇಟಿಯ ಬಗ್ಗೆ ಮಾಹಿತಿ ನೀಡುವವರಿಗೆ ಸಂಕ್ಷಿಪ್ತವಾಗಿ ತಿಳಿಸಿ ನಿಮ್ಮ ಪರಿಚಯವನ್ನು ಮಾಡಿಕೊಳ್ಳಿ. ನೀವು ಸಮೀಕ್ಷೆ ಮಾಡುವ ಮುನ್ನ ನಿಮ್ಮ ಗುರುತಿನ ಚೀಟಿಯನ್ನು ತೋರಿಸಿ, ಸ್ನೇಹಮಯ ಮತ್ತು ಸೌಜನ್ಯ ಪೂರ್ವಕ ನಡತೆಯಿಂದ ಸಮೀಕ್ಷೆಗೆ ಬೇಕಾಗುವ ಮಾಹಿತಿಯನ್ನು ಪಡೆದುಕೊಳ್ಳಲು ಸಹಾಯವಾಗುತ್ತದೆ.
ಕುಟುಂಬಕ್ಕೆ ಸೇರದ ವ್ಯಕ್ತಿಯ ಮೂಲಕವಾಗಲಿ ಅಥವಾ ಸಂಘ ಸಂಸ್ಥೆಗಳ ಮೂಲಕವಾಗಲಿ ಮಾಹಿತಿಯನ್ನು ಸಂಗ್ರಹಿಸಬೇಡಿ. ಇದು ಮನೆ ಮನೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಕಾರ್ಯಕ್ರಮವಾಗಿದೆ.
ಮಾಹಿತಿದಾರರು (ಪುರುಷ ಅಥವಾ ಮಹಿಳೆ) ಸಾಮಾನ್ಯವಾಗಿ ತಿಳುವಳಿಕೆ ಉಳ್ಳವರಾಗಿದ್ದು, ಕುಟುಂಬದ ಬಗ್ಗೆ ಮಾಹಿತಿ ನೀಡಲು ಸಮರ್ಥರಾಗಿರಬೇಕು. ಅಪ್ರಾಪ್ತ ವಯಸ್ಸಿನ ಮಕ್ಕಳಿಂದ ಮಾಹಿತಿ ಪಡೆಯಬಾರದು. ಸಮೀಕ್ಷೆಯ ವೇಳೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ವಾಗ್ವಾದ ಮಾಡದೇ ವಿನಯಪೂರ್ವಕವಾಗಿ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಬೇಕಿದೆ. ನಿಮಗೆ ಮಾಹಿತಿ ನೀಡುವವರು ಮಹಿಳೆಯರಾಗಿದ್ದಲ್ಲಿ ಹೆಚ್ಚು ಗೌರವಪೂರ್ವಕವಾಗಿ ವರ್ತಿಸಿ.
ಕುಟುಂಬದ ಸದಸ್ಯರು ಮಾಹಿತಿಯನ್ನು ನೀಡುವಾಗ ತಾಳ್ಮೆಯಿಂದ ವರ್ತಿಸಿ ಅವರು ನೀಡುವ ಮಾಹಿತಿಯನ್ನು ಸರಿಯಗಾಗಿ ದಾಖಲು ಮಾಡಬೇಕು. ಅವರು ಉತ್ತರಿಸುವ ಮೊದಲೇ ಇನ್ನಿತರ ಅಂಶಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬೇಡಿ.
ಸದಸ್ಯರು ನೀಡುವ ಮಾಹಿತಿಯನ್ನು ನಮೂನೆ-3 ರಲ್ಲಿ ನಮೂದಿಸಿರುವ ಅಂಶಗಳ ಬಗ್ಗೆ ಹಾಗೂ ನಿಗದಿತ ಕೋಡ್ ಸಂಖ್ಯೆಗಳ ಪ್ರಕಾರ ಮೊಬೈಲ್ ಆಪ್ ನಲ್ಲಿ ನಮೂದಿಸಬೇಕು.
‘ಯುವನಿಧಿ ಯೋಜನೆ’ ಕುರಿತು ಮಹತ್ವದ ಮಾಹಿತಿ: ಸ್ವಯಂ ಘೋಷಣೆ ಪತ್ರ ಸಲ್ಲಿಸಲು ಅವಕಾಶ | Yuvanidhi Scheme
ಭೂಕಬಳಿಕೆದಾರರಿಂದ ಶೀಬಿ ಅರಣ್ಯಭೂಮಿ ರಕ್ಷಣೆಗೆ ಸಚಿವ ಈಶ್ವರ ಖಂಡ್ರೆ ಸೂಚನೆ