ಶಿವಮೊಗ್ಗ: ಸಾಗರದ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರದ ಡಿವೈಎಸ್ಪಿ ಅವರಿಗೆ ಪ್ರದೀಪ್ ಎಂಬುವರು ದೂರು ನೀಡಿದ್ದಾರೆ.
ಇಂದು ಸಾಗರ ನಗರದ ಡಿವೈಎಸ್ಪಿ ಕಚೇರಿಗೆ ತೆರಳಿದಂತ ಅವರು, ಸಾಗರ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ದೂರು ನೀಡಿದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಪ್ರದೀಪ್ ಎಂಬುವರು, ಜನವರಿ.15, 2025ರಂದು ನನ್ನ ಮೇಲೆ ದರೋಡೆಗೆ ಮಾದಕ ದ್ರವ್ಯದ ಅಮಲಿನಲ್ಲಿದ್ದಂತ ವ್ಯಕ್ತಿಯೊಬ್ಬ ಹಲ್ಲೆ ಮಾಡಿದ್ದಾನೆ. ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಕಾರಿನ ಗ್ಲಾಸ್ ಹೊಡೆದು ನಷ್ಟ ಉಂಟು ಮಾಡಿದ್ದಾನೆ. ಈ ಆರೋಪಿಯ ವಿರುದ್ಧ ಸಾಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಆದರೇ ಪೊಲೀಸರು ಮಾದಕ ದ್ರವ್ಯ ಪತ್ತೆ ಪರೀಕ್ಷೆಯನ್ನು ಮಾಡದೇ, ಕೇವಲ ಮೂತ್ರ ಪರೀಕ್ಷೆ ಮಾಡಿಸಿ, ಅದರಲ್ಲಿ ವರದಿ ನೆಗೆಟಿವ್ ಬಂದಿದ್ದಕ್ಕೆ ಆತನನ್ನು ಬಿಟ್ಟು ಕಳಿಸಿದ್ದಾಗಿ ಆರೋಪಿಸಿದರು.
ನಾವು ಕೇಸ್ ದಾಖಲಾದ ಬಳಿಕ ಆತ ಮಾದಕ ದ್ರವ್ಯ ವ್ಯಸನಿಯಾಗಿದ್ದಾನೆ. ಆತನ ರಕ್ಷದ ಮಾದರಿಯನ್ನು ಪರೀಕ್ಷೆ ಮಾಡಿಸಿ ನೋಡಿ ಎಂಬುದಾಗಿ ಸಾಗರ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಅವರಲ್ಲಿ ಮನವಿ ಮಾಡಿದರೂ ಆ ಕೆಲಸ ಮಾಡಿಲ್ಲ. ದಿನಾಂಕ 16-01-2025ರಂದು ಆರೋಪಿತನನ್ನು ಬಿಟ್ಟು ಕಳುಹಿಸಲಾಗಿರುತ್ತದೆ. ಇದನ್ನು ಪ್ರಶ್ನಿಸಿದಾಗ ನ್ಯಾಯಾಲಯ ಜಾಮೀನು ನೀಡಿರುವುದಾಗಿ ತಿಳಿಸುತ್ತಾರೆ. ಆ ಬಗ್ಗೆ ಸಾಗರದ ನ್ಯಾಯಾಲಯಕ್ಕೆ ತೆರಳಿ ಖುದ್ದಾಗಿ ನ್ಯಾಯಾಧೀಶರ ಬಳಿ ಮನವಿ ಮಾಡಿದಾಗ, ಈ ಥರ ಯಾವುದೇ ಪ್ರಕರಣ ವಿಚಾರಣೆಗೆ ಬಂದಿರುವುದಿಲ್ಲ ಎಂಬುದಾಗಿ ಹೇಳಿರುತ್ತಾರೆ. ಮತ್ತೆ ಸಾಗರ ನಗರ ಠಾಣೆಗೆ ತೆರಳಿ ಪೊಲೀಸ್ ಇನ್ಸ್ ಪೆಕ್ಟರ್ ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಲಿಲ್ಲ ಎಂಬುದಾಗಿ ಆರೋಪ ಮಾಡಿದ್ದಾರೆ.
ಈ ಎಲ್ಲಾ ಕಾರಣದಿಂದಾಗಿ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಪೊಲೀಸ್ ಸಿಬ್ಬಂದಿಯಾದಂತ ಸನಾವುಲ್ಲಾ ವಿರುದ್ಧ ಕರ್ತವ್ಯ ಲೋಪವೆಸಗಿದ ಆರೋಪದಡಿ ಕ್ರಮ ಕೈಗೊಳ್ಳುವಂತೆ ಡಿವೈಎಸ್ಪಿಗೆ ದೂರು ನೀಡಿದ್ದೇವೆ. ನಾಳೆ ಎಸ್ಪಿಯವರನ್ನು ಭೇಟಿಯಾಗಿ ದೂರು ನೀಡುತ್ತಿದ್ದೇವೆ. ಅಲ್ಲದೇ ಬೆಂಗಳೂರಿಗೆ ತೆರಳಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಡಿಜಿ ಹಾಗೂ ಐಜಿಪಿಯವರಿಗೂ ದೂರು ನೀಡುವುದಾಗಿ ತಿಳಿಸಿದರು.
ಇಂದು ಡಿವೈಎಸ್ಪಿಗೆ ಸಲ್ಲಿಸಿದಂತ ದೂರಿನಲ್ಲಿ ಏನಿದೆ.?
ನಾನು ಸಾಗರದ ಬೆಳಲಮಕ್ಕಿಯಲ್ಲಿ ವಾಸವಾಗಿರುತ್ತೇನೆ. ನಾನು ರಿಯಲ್ ಎಸ್ಟೇಟ್ ಉದ್ಯೋಗ ಮಾಡುತ್ತಿದ್ದೇನೆ. ನಾನು ದಿನಾಂಕ: 15-01-2025 ರಂದು ನನ್ನ ಸ್ನೇಹಿತನಾದ ರಂಜನ್ ಬಿನ್ ರಾಘವೇಂದ್ರ ಹೆಚ್.ಆರ್. 30 ವರ್ಷ, ಮಾರಿಗುಡಿ ಹಿಂಭಾಗ, ಸಾಗರ ನಗರ ವಾಸಿಯಾದ ಇವನ ಮಹೀಂದ್ರ ಎಕ್ಸ್‌ಯುವಿ-ಒಒ, ನೊಂದಣಿ ಸಂಖ್ಯೆ ಕೆಎ-04/ಎಂಕೆ-5748 ವಾಹನವನ್ನು ತೆಗೆದುಕೊಂಡು ಸಾಗರದ ಜನ್ನತ್ ನಗರದ ಹಿಂಭಾಗದ ತೋಟವನ್ನು ನೋಡಲು ಸಂಜೆ 5-30 ರ ಸಮಯದಲ್ಲಿ ಹೋಗಿರುತ್ತೇವೆ.
ತೋಟವನ್ನು ನೋಡುತ್ತಾ ಇರುವಾಗ ಆಹದ್ ಎಂಬಾತನು ಅಲ್ಲಿಯೇ ನಮ್ಮನ್ನು ನೋಡುತ್ತಾ ಇದ್ದನು. ನಾನು ಮತ್ತು ನನ್ನ ಸ್ನೇಹಿತ ರಂಜನ್ ಅಲ್ಲಿಂದ ಹೊರಡಲು ಕಾರಿನ ಬಳಿ ಬಂದಾಗ ಸುಮಾರು 6-00 ಗಂಟೆ ಸಮಯದಲ್ಲಿ ಅಲ್ಲಿಯೇ ಇದ್ದ ಆಹದ್ ಎಂಬಾತನು ನಮ್ಮ ಬಳಿ ಬಂದು ನನ್ನ ಕೊರಳಿದ್ದ ಬಂಗಾರದ ಚೈನನ್ನು ಕದಿಯುವ ಸಲುವಾಗಿ ಕೈ ಹಾಕಿ ಎಳೆದು, ನನ್ನ ಬಲಗೈಗೆ ಕಟ್ಟಿರುತ್ತಾನೆ ಹಾಗೂ ತನ್ನ ಬಳಿ ಇದ್ದ ಚಾಕುವನ್ನು ತೋರಿಸಿ ನೀವು ಕಾರು ಹತಿ ಹೊರಟರೆ ನಿಮ್ಮನ್ನು ಕೊಲೆ ಮಾಡುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾನೆ.
ಈ ಸಂದರ್ಭದಲ್ಲಿ ನಾವು ಗಾಬರಿಯಿಂದ ಅಲ್ಲಿಂದ ಹೊರಡಲು ಕಾರನ್ನು ಹತ್ತಿದಾಗ ಆತನು ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿಕೊಂಡು ನಮ್ಮ ಕಾರಿನ ಗಾಜಿಗೆ ಮತ್ತು ಬಾಗಿಲಿಗೆ ಹೊಡೆದಿರುತ್ತಾನೆ. ಇದರಿಂದ ನಮ್ಮ ಕಾರಿನ ಗ್ಲಾಸ್ ಮತ್ತು ಡೋರಿಗೆ ಡ್ಯಾಮೇಜ್ ಆಗಿರುತ್ತದೆ. ಇದರಿಂದ ಸುಮಾರು 80,000-00 ನಷ್ಟ ಆಗಿರುತ್ತದೆ.
ತಕ್ಷಣ ನಾವು ಗಾಬರಿಯಿಂದ ಹೆದರಿ ಅಲ್ಲಿಂದ ಕಾರನ್ನು ಓಡಿಸಿಕೊಂಡು ಬಂದು ಪೊಲೀಸ್ ಸ್ಟೇಷನ್‌ಗೆ ಬಂದಿರುತ್ತೇವೆ. ಆಹದ್ ಈ ಹಿಂದೆಯೇ ಈ ತರಹದ ದರೋಡೆ, ಕಳ್ಳತನದ ಕೆಲಸವನ್ನು ಮಾಡಿರುತ್ತಾನೆ. ಈತನು ದರೋಡೆ ಮತ್ತು ಕೊಲೆ ಮಾಡುವ ಉದ್ದೇಶದಿಂದ ಈ ರೀತಿಯ ಕೃತ್ಯವನ್ನು ಎಸಗಿರುವುದರಿಂದ ಮಾನ್ಯರಾದ ತಾವು ತಕ್ಷಣ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಮೇಲ್ಕಂಡ ಆರೋಪಿತನಾದ ಆಹದ್ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮ್ಮ ಜೀವಕ್ಕೆ ಸೂಕ್ತ ರಕ್ಷಣೆಯನ್ನು ಮತ್ತು ನಮಗೆ ಆದ ಲುಕ್ಸಾನಿಗೆ ಪರಿಹಾರವನ್ನು ಕೊಡಿಸಿಕೊಡುವಂತೆ ಕೋರಿ ದಿನಾಂಕ : 15-01-2025 ರಂದು ಸಾಗರ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿರುತ್ತೇನೆ.
ಸದರಿ ನಾನು ನೀಡಿದ ಫಿರ್ಯಾದಿಯನ್ನು ಸಾಗರ ಪೇಟೆ ಪೊಲೀಸರು ಪಡೆದಿರುತ್ತಾರೆ. ಸ್ವಲ್ಪ ಸಮಯ ಠಾಣೆಯಲ್ಲಿ ನಾನು ಕಾದ ನಂತರ ಮತ್ತೆ ನಾವು ಹಾಕಿದ ಒತ್ತಡದ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್‌ರವರ ಜೊತೆ ಚರ್ಚೆ ಮಾಡಿ ಆರೋಪಿಯನ್ನು ಠಾಣೆಗೆ ಸುಮಾರು 7-00 ಗಂಟೆಗೆ ಕರೆ ತಂದಿರುತ್ತಾರೆ. ಆನಂತರ ಆರೋಪಿಯನ್ನು ವಿಚಾರಣೆಗೊಳಪಡಿಸಿ ಮಾದಕ ದ್ರವ್ಯ ಸೇವನೆಯ ಪರೀಕ್ಷಿಸಲು ನಾವು ಕೇಳಿಕೊಂಡಿದ್ದು, ಅದಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್‌ರವರು ಒಪ್ಪಿರುವುದಿಲ್ಲ. ಮತ್ತೂ ನಾವು ಒತ್ತಡ ಹಾಕಿದ ಮೇರೆಗೆ ನಂತರ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಮೂತ್ರ ಪರೀಕ್ಷೆ ಮಾಡಿಸಿದ್ದು, ನೆಗಟಿವ್ ವರದಿ ಬಂದಿದೆ ಎಂದು ತಿಳಿಸಿರುತ್ತಾರೆ.
ಅದರ ನಂತ ಮೇಲ್ನೋಟಕ್ಕೆ ಆರೋಪಿಯ ಮೇಲೆ ಸುಮಾರು 8-00 ಗಂಟೆ ಸುಮಾರಿಗೆ ಭಾರತೀಯ ನ್ಯಾಯ ಸಂಹಿತ ನಾವು ರಕ್ತ ಪರೀಕ್ಷೆ ಎಫ್‌ಎಸ್‌ಎಲ್ ಮಾಡಿಸಲು ಕೋರಿರುತ್ತೇವೆ. ಇದಕ್ಕೆ ಒಪ್ಪದ ಪೊಲೀಸ್ ಇನ್ಸ್‌ಪೆಕ್ಟರ್‌ರವರು (ಬಿಎನ್‌ಎಸ್) 2023 ರಡಿಯಲ್ಲಿ ಸೆಕ್ಷನ್ 3096), 324(4) ರಡಿಯಲ್ಲಿ ಎಫ್.ಐ.ಆರ್. ಮಾಡಿ ನಮಗೆ ಕಣ್ಣೊರೆಸುವ ತಂತ್ರ ಮಾಡಿರುತ್ತಾರೆ. ಆನಂತರ ನನ್ನನ್ನು ಠಾಣೆಯಿಂದ ಹೊರ ಕಳುಹಿಸಿದ್ದು, ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸದೇ ಆರೋಪಿಯ ಹಣದ ಆಮಿಷಕ್ಕೆ ಒಳಗಾಗಿ ಆತನನ್ನು ದಿನಾಂಕ : 16-01-2025 ರಂದು ಮಧ್ಯಾಹ್ನ 12-00 ಗಂಟೆ ಸಮಯಕ್ಕೆ ಠಾಣೆಯಿಂದ ಬಿಟ್ಟು ಕಳುಹಿಸಿರುತ್ತಾರೆ.
ಇದನ್ನು ತಿಳಿದ ನಾನು ಠಾಣೆಗೆ ಬಂದು ವಿಚಾರಿಸಿದಾಗ ಸರ್ಕಲ್ ಇನ್ಸ್‌ಪೆಕ್ಟರ್‌ರವರು ಮತ್ತು ಇಲಾಖೆ ಸಿಬ್ಬಂದಿಯಾದ ಸನಾವುಲ್ಲ ಇವರು ಮಾನ್ಯ ನ್ಯಾಯಾಧೀಶರು ಆರೋಪಿಯನ್ನು ಜಾಮೀನಿನ ಮೇಲೆ ಬಿಟ್ಟಿರುತ್ತಾರೆಂದು ತಪ್ಪು ಮಾಹಿತಿ ನೀಡಿ ಕಾನೂನಿನ ಉಲ್ಲಂಘನೆ ಮಾಡಿರುತ್ತಾರೆ. ಆನಂತರ ನಾನು ನ್ಯಾಯಾಲಯದಲ್ಲಿ ವಿಚಾರ ಮಾಡಿ ನ್ಯಾಯಾಲಯದಲ್ಲಿ ಬೇಲ್ ಆಗದ ವಿಷಯವನ್ನು ತಿಳಿಸಿದಾಗ ಮತ್ತೆ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಸನಾವುಲ್ಲಾ ಇವರು ಆರೋಪಿಯನ್ನು ಠಾಣೆಗೆ ಹುಡುಕಿ ಕರೆಸಿಕೊಂಡಿರುತ್ತಾರೆ. ಮೇಲ್ಕಂಡಂತೆ ಎಫ್ ಐ.ಆರ್ ಆದ ದೂರಿನ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಾದ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಪೊಲೀಸ್ ಸಿಬ್ಬಂದಿ ಸನಾವುಲ್ಲ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ಡಿವೈಎಸ್ಪಿಗೆ ಸಲ್ಲಿಸಿದಂತ ದೂರಿನಲ್ಲಿ ಮನವಿ ಮಾಡಿದ್ದಾರೆ.
ಇನ್ನೂ ಇದೇ ಪತ್ರವನ್ನು ಇ-ಮೇಲ್ ಮೂಲಕ ದಾವಣಗೆರೆ ವಿಭಾಗದ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಅವರಿಗೂ ಕಳುಹಿಸಲಾಗಿದ್ದು, ಸಾಗರ ನಗರ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯ ವಿರುದ್ಧ ಕ್ರಮಕ್ಕೆ ಆಗ್ರಹಿಸಲಾಗಿದೆ.
ಸಾಗರ ಡಿವೈಎಸ್ಪಿ ಗೋಪಾಲಕೃಷ್ಣ ತಿ ನಾಯಕ್ ಹೇಳಿದ್ದೇನು?
ಇಂದು ಪ್ರದೀಪ್ ಎಂಬುವರು ದೂರು ನೀಡಿದ್ದಾರೆ. ಆಹದ್ ಎಂಬಾತನ ವಿರುದ್ಧ ಸಾಗರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕೇಸ್ ಸಂಬಂಧ ಆತನನ್ನು ಬಂಧಿಸಿ ಡ್ರಗ್ಸ್ ತೆಗೆದುಕೊಂಡಿದ್ದಾರೆ ಎಂಬ ಆರೋಪದ ಮೇಲೆ ಮೂತ್ರ ಪರೀಕ್ಷೆಯನ್ನು ಮಾಡಲಾಗಿದೆ. ಆದರೇ ವರದಿಯಲ್ಲಿ ನಗೆಟಿವ್ ಎಂಬುದಾಗಿ ಬಂದಿದೆ. ತನಿಖೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆ ಬಗ್ಗೆ ದೂರು ನೀಡಿದ್ದಾರೆ. ಆತ ಡ್ರಗ್ಸ್ ಸೇವನೆಯ ಬಗ್ಗೆ ಇಂದು ಮನವರಿಕೆ ಮಾಡಿಕೊಟ್ಟಿದ್ದಾರೆ. ಆ ಕುರಿತು ಪರಿಶೀಲನೆ ಮಾಡುತ್ತೇವೆ. ಒಂದು ವೇಳೆ ಡ್ರಗ್ಸ್ ತೆಗೆದುಕೊಂಡಿದ್ದರ ಬಗ್ಗೆ ದೃಢಪಟ್ಟದೇ ನಾವು ಸೂಕ್ತ ಕಾನೂನು ಕ್ರಮವನ್ನು ಆರೋಪಿಯ ವಿರುದ್ಧ ಕೈಗೊಳ್ಳುವುದಾಗಿ ಹೇಳಿದರು.
ಸಾಗರ ನಗರ ಠಾಣೆಯ ಪೊಲೀಸ್ ಸಿಬ್ಬಂದಿ ಸನಾವುಲ್ಲಾ ಕರ್ತವ್ಯ ಲೋಪದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದಂತ ಅವರು, ಅವರು ಸರಿಯಾಗಿ ಕರ್ತವ್ಯ ಮಾಡಿಲ್ಲ ಎಂಬುದಾಗಿ ಹೇಳಿದ್ದಾರೆ. ಈ ಬಗ್ಗೆ ಸಾಗರ ಗ್ರಾಮಾಂತರ ಠಾಣೆಯ ಪೊಲೀಸರಿಂದ ತನಿಖೆ ನಡೆಸಲಾಗುತ್ತದೆ. ನಮ್ಮ ಮೇಲಧಿಕಾರಿಗಳ ಗಮನಕ್ಕೂ ತರಲಾಗುತ್ತದೆ ಎಂಬುದಾಗಿ ತಿಳಿಸಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್: ಆದೇಶ ಕಾಯ್ದರಿಸಿದ ಹೈಕೋರ್ಟ್
ಒಂದು ಕಡೆ ಕಾಂಗ್ರೆಸ್ ನಿಂದ, ಮತ್ತೊಂದು ಕಡೆ ಕಳ್ಳ ಖದೀಮರಿಂದ ಲೂಟಿ: ಛಲವಾದಿ ನಾರಾಯಣಸ್ವಾಮಿ ಕಿಡಿ