ಬೆಂಗಳೂರು : ಬೆಂಗಳೂರು ರಸ್ತೆಗಳು ಇದೀಗ ಕೇವಲ ಗುಂಡಿಗಳಿಂದಲೇ ತುಂಬಿ ಹೋಗಿವೆ. ಇದರಿಂದ ಬೆಂಗಳೂರು ಜನತೆ ಸಾಕಷ್ಟು ತೊಂದರೆಗಳು ಅನುಭವಿಸುತ್ತಿದ್ದಾರೆ. ಅಲ್ಲದೆ ಕಂಪನಿಗಳು ಸಹ ಈ ಕುರಿತು ಆಕ್ರೋಶ ಹೊರ ಹಾಕಿದ್ದು ಈ ಹಿಂದೆ ಬೆಂಗಳೂರು ತೊರೆಯುವ ನಿರ್ಧಾರ ಕೈಗೊಂಡಿದ್ದ ಕಂಪನಿಗಳು ಇದೀಗ ಮತ್ತೆ ಯುಟರ್ನ್ ಹೊಡೆದು ಬೆಂಗಳೂರು ನಮ್ಮ ಮನೆ, ಬೆಂಗಳೂರನ್ನು ಬಿಟ್ಟು ಬೇರೆ ಕಡೆ ಎಲ್ಲೂ ಹೋಗಲ್ಲ ಎಂದು ಯುಟರ್ನ್ ಹೊಡೆದಿವೆ.
ಹೌದು ರಸ್ತೆಗುಂಡಿಯಿಂದ ರೋಸಿ ಹೋಗಿರುವ ಐಟಿ ಕಂಪನಿಗಳು ಬೆಂಗಳೂರು ತೊರೆಯುವ ನಿರ್ಧಾರಕ್ಕೆ ಮುಂದಾಗಿದ್ದವು. ಈ ವಿಚಾರ ಸಾಕಷ್ಟು ಚರ್ಚೆಗೆ ಕೂಡ ಗ್ರಾಸವಾಗಿತ್ತು. ಸದ್ಯ ಈ ವಿಚಾರವಾಗಿ ಬ್ಲಾಕ್‌ಬಕ್ ಕಂಪನಿ ಸಿಇಒ ರಾಜೇಶ್ ಯಾಬಾಜಿ ಟ್ವೀಟ್ ಮಾಡಿದ್ದು, ನಾವು ಬೆಂಗಳೂರು ತೊರೆಯುವುದಿಲ್ಲ, ಆದರೆ ಬೆಂಗಳೂರಿನಲ್ಲೇ ಬೇರೆಡೆ ಸ್ಥಳಾಂತರಗೊಳ್ಳುವುದಾಗಿ ಹೇಳಿದ್ದಾರೆ.
ಈ ಬಗ್ಗೆ ರಾಜೇಶ್ ಯಾಬಾಜಿ ಟ್ವೀಟ್ ಮಾಡಿದ್ದು, 2015 ರಲ್ಲಿ ಬೆಂಗಳೂರಿನ ಕೋರಮಂಗಲದ ಸೋನಿ ಸಿಗ್ನಲ್ ಬಳಿ ಬ್ಲಾಕ್‌ಬಕ್ ತನ್ನ ಸಣ್ಣ ಕಂಪನಿಯೊಂದನ್ನು ಆರಂಭಿಸಿತು. ನಾವು ನಮ್ಮ ಕಾರ್ಯಾ ಮತ್ತು ತಂಡವನ್ನು ವಿಸ್ತರಿಸುತ್ತಿದ್ದಂತೆ, ದೊಡ್ಡ ಸ್ಥಳವುಳ್ಳ ಕಚೇರಿ ಮತ್ತು ಸೂಕ್ತ ಸೌಲಭ್ಯಗಳಿಗಾಗಿ ನಾವು 2016 ರಲ್ಲಿ ಬೆಳ್ಳಂದೂರು – ಹೊರ ವರ್ತುಲ ರಸ್ತೆಗೆ ಸ್ಥಳಾಂತರಗೊಂಡೆವು.
ಇನ್ನು ನಾವು ಬೆಂಗಳೂರು ನಗರದಲ್ಲಿಯೇ ಮುಂದುವರಿಯುವುದಲ್ಲದೆ, ಇಲ್ಲಿ ನಮ್ಮ ಹೆಜ್ಜೆಗುರುತನ್ನು ಮೂಡಿಸಲು ಬಯಸುತ್ತೇವೆ. ಬೆಂಗಳೂರು ನಮ್ಮ ಮನೆಯಾಗಿದ್ದು, ಮುಂದೆಯೂ ಮನೆಯಾಗಿ ಇರಲಿದೆ. ನಮ್ಮ ಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಸಂಬಂಧಿತ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದು ರಾಜೇಶ್ ಯಾಬಾಜಿ ಟ್ವೀಟ್ ಮಾಡಿದ್ದಾರೆ.
ನಾವು ನಗರದಲ್ಲೇ ಬೇರೆ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ. ಆ ಮೂಲಕ ನಮ್ಮ ಉದ್ಯೋಗಿಗಳಿಗೆ ಪ್ರಯಾಣ ಮತ್ತಷ್ಟು ಸುಗಮಗೊಳಿಸುತ್ತದೆ. ಆದ್ದರಿಂದ ಉತ್ತಮ ವ್ಯಾಪಾರ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮೂಲಸೌಕರ್ಯ ಸುಧಾರಣೆಗಳನ್ನು ಸಕ್ರಿಯಗೊಳಿಸಲು ನಾವು ಸಂಬಂಧಪಟ್ಟ ಅಧಿಕಾರಿಗಳಿಂದ ಸಹಾಯವನ್ನು ಪಡೆಯುವುದಾಗಿ ತಿಳಿಸಿದ್ದಾರೆ.
— Rajesh Yabaji (@YABAJI) September 18, 2025







