ಬೆಂಗಳೂರು : ಕದ್ದ ಆಸ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಪೊಲೀಸರು ಕೇಳಿದಾಗ ಅದನ್ನು ಹಸ್ತಾಂತರ ಮಾಡಲು ವಿಳಂಬಗೊಳಿಸುವ ಅಥವಾ ನಿರಾಕರಿಸುವ ಯಾವುದೇ ಕಾನೂನುಬದ್ಧ ಹಕ್ಕನ್ನು ಹೊಂದಿರುವುದಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಅಲ್ಲದೆ, ಕದ್ದ ಆಸ್ತಿ ವಿಷಯದಲ್ಲಿ ಅದು ಚಿನ್ನದ ಸಾಲ ಕಂಪನಿಯಾಗಿದ್ದರೂ ಸಹ ಕದ್ದ ಆಸ್ತಿಯನ್ನು ಹೊಂದುವುದು ರಕ್ಷಾ ಕವಚವಾಗಿ ಬದಲಾಗುವುದಿಲ್ಲ. ಅಲ್ಲದೇ, ಬಡ್ಡಿ ಮತ್ತು ಭದ್ರತೆಯ ಕಾರಣ ನೀಡಿ ಕದ್ದ ವಸ್ತುಗಳನ್ನು ತನ್ನ ಬಳಿಯೇ ಇಟ್ಟುಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಆದೇಶಿಸಿದೆ.
ಕೆಂಗೇರಿಯ ಕರೂರು ವೈಶ್ಯ ಬ್ಯಾಂಕ್ ಶಾಖೆಯಿಂದ ಕದ್ದ ಒಡವೆಗಳನ್ನು ಅಡವಿಟ್ಟುಕೊಂಡು ಸಾಲ ಮಂಜೂರು ಮಾಡಿದ್ದ ಆರೋಪದಲ್ಲಿ ಕದ್ದ ಒಡವೆಗಳನ್ನು ಒಪ್ಪಿಸುವಂತೆ ಕೆಂಗೇರಿ ಪೊಲೀಸರು ನೀಡಿದ್ದ ನೋಟಿಸ್ ಪ್ರಶ್ನಿಸಿ ಐಐಎಫ್ಎಲ್ ಫೈನಾನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ
2022ರಿಂದ ಕರೂರು ವೈಶ್ಯ ಬ್ಯಾಂಕ್ನ ಕೆಂಗೇರಿ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಮಹಿಳಾ ಸಿಬ್ಬಂದಿಯೊಬ್ಬರು ಸೇವೆ ಸಲ್ಲಿಸುತ್ತಿದ್ದರು. 2025ರ ಅಕ್ಟೋಬರ್ ತಿಂಗಳಲ್ಲಿ ನಡೆದ ಅನಿರೀಕ್ಷಿತ ಮರು ಮೌಲ್ಯ ಮಾಪನದ ಸಮಯದಲ್ಲಿ ಸಹಾಯಕ ವ್ಯವಸ್ಥಾಪಕಿ ನಿರ್ವಹಿಸುವ ಚಿನ್ನದ ಸಾಲ ಖಾತೆಗಳ ಸಂಬಂಧ ಗಂಭೀರ ಅಕ್ರಮಗಳು ಪತ್ತೆಯಾಗಿದ್ದವು.ಈ ಕುರಿತಂತೆ ನಡೆದ ಪರಿಶೀಲನೆ ವೇಳೆ, ಗ್ರಾಹಕರು ಅಡವಿಟ್ಟಿದ್ದ ನಿಜವಾದ ಚಿನ್ನಾಭರಣಗಳನ್ನು ರಹಸ್ಯವಾಗಿ ತೆಗೆದು ನಕಲಿ ವಸ್ತುಗಳೊಂದಿಗೆ ಬದಲಾಯಿಸುವ ಮೂಲಕ ಕಳ್ಳತನ ಮತ್ತು ಕ್ರಿಮಿನಲ್ ನಂಬಿಕೆ ದ್ರೋಹಕ್ಕೆ ಸಮನಾದ ಕೃತ್ಯಗಳಲ್ಲಿ ಅವರು ಭಾಗಿಯಾಗಿರುವ ಅಂಶ ಗೊತ್ತಾಗಿತ್ತು.
ಕದ್ದ ವಸ್ತುಗಳನ್ನು ಐಐಎಫ್ಎಲ್ ಫೈನಾನ್ಸ್ ಕಂಪನಿ ಸೇರಿ ವಿವಿಧೆಡೆಗಳಲ್ಲಿ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಆರೋಪವಿತ್ತು. ಈ ಆರೋಪ ಸಂಬಂಧ ಕರೂರು ವೈಶ್ಯಾ ಬ್ಯಾಂಕ್ ದೂರು ನೀಡಿದ್ದು, ಪೊಲೀಸರು ಫೆನಾನ್ಸ್ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ಇದನ್ನು ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ವೇಳೆ ಐಐಎಫ್ಎಲ್ ಫೈನಾನ್ಸ್ ಕಂಪನಿ ಪರ ವಕೀಲರು, ಚಿನ್ನವನ್ನು ಉತ್ತಮ ನಂಬಿಕೆಯಿಂದ ಸ್ವೀಕರಿಸಲಾಗಿದೆ. ಸೂಕ್ತ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಸಾಲಗಳನ್ನು ವಿತರಿಸಲಾಗಿದೆ. ಒಪ್ಪಂದದ ಷರತ್ತುಗಳ ಪ್ರಕಾರ ಅಡವಿಟ್ಟ ಚಿನ್ನವನ್ನು ನೀಡಲು ಸಾಧ್ಯವಿಲ್ಲ. ಅಲ್ಲದೇ, ಚಿನ್ನವನ್ನು ವಶಪಡಿಸಿಕೊಳ್ಳದೇ ತನಿಖೆಗೆ ಸಹಕರಿಸಲು ಸಾಧ್ಯವಿದೆ ಎಂದು ತಿಳಿಸಿದ್ದರು.








