ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆಯಾಗಿದ್ದು, ನಗರದ ಸೌಂದರ್ಯೀಕರಣ ಮತ್ತು ಸಾರ್ವಜನಿಕ ಸೌಲಭ್ಯಗಳಿಗಾಗಿ ಕೋಟ್ಯಂತರ ರೂಪಾಯಿ ಅನುದಾನ ಮೀಸಲಿರಿಸಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಅವರು ತಿಳಿಸಿದರು.
ಇಂದು ಸಾಗರದ ವಾರ್ಡ್ ನಂಬರ್.16ರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಪುಡ್ ಕೋರ್ಟ್ ನಿರ್ಮಾಣದ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಮೂರು ಹಂತಗಳಲ್ಲಿ ಹೈಟೆಕ್ ‘ಫುಡ್ ಕೋರ್ಟ್’ ಸ್ಥಾಪನೆ
ಸಾಗರ ನಗರಕ್ಕೆ ಬರುವ ಪ್ರವಾಸಿಗರು ಮತ್ತು ಸ್ಥಳೀಯರ ಅನುಕೂಲಕ್ಕಾಗಿ ಮೂರು ಆಯಕಟ್ಟಿನ ಸ್ಥಳಗಳಲ್ಲಿ ಸುಸಜ್ಜಿತ ಫುಡ್ ಕೋರ್ಟ್ ನಿರ್ಮಿಸಲು ಉದ್ದೇಶಿಸಲಾಗಿದೆ.
-
ಕೈಗಾರಿಕಾ ವಲಯ: ಹೈವೇ ಪಕ್ಕದಲ್ಲಿರುವ ಕೈಗಾರಿಕಾ ವಲಯದಲ್ಲಿ ಮೊದಲು ಫುಡ್ ಕೋರ್ಟ್ ಕಾಮಗಾರಿ ಆರಂಭವಾಗಲಿದ್ದು, ಇಲ್ಲಿನ ಕಾರ್ಮಿಕರಿಗೆ ಅನುಕೂಲವಾಗಲು 20 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ. ಶೀಘ್ರವೇ ಇಲ್ಲಿ ಸುಂದರ ಅಂಗಡಿ ಮಳಿಗೆಗಳು ತಲೆ ಎತ್ತಲಿವೆ.
-
ದ್ವಜಸ್ತಂಭದ ಬಳಿ: ಗಣಪತಿ ಕೆರೆ ಮೇಲ್ಭಾಗದ ದ್ವಜಸ್ತಂಭದ ಬಳಿ 60 ಲಕ್ಷ ರೂ. ವೆಚ್ಚದಲ್ಲಿ ಸುಂದರ ಫುಡ್ ಕೋರ್ಟ್ ಜೊತೆಗೆ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು.
-
ಹಳೆ ಬಸ್ ನಿಲ್ದಾಣ: ಹಳೆ ಬಸ್ ನಿಲ್ದಾಣದ ಆವರಣದಲ್ಲಿ ಸುಮಾರು 30ಕ್ಕೂ ಹೆಚ್ಚು ಮಳಿಗೆಗಳಿರುವ ವಿಶಾಲವಾದ ಫುಡ್ ಕೋರ್ಟ್ ಬರಲಿದೆ. ಇಲ್ಲಿ ಶಾಕಾಹಾರಿ ಮತ್ತು ಮಾಂಸಾಹಾರಿ ವಿಭಾಗಗಳನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು.
ಪ್ರವಾಸೋದ್ಯಮ ಮತ್ತು ಸೌಂದರ್ಯೀಕರಣಕ್ಕೆ ಆದ್ಯತೆ
“ಸಿಗಂದೂರು, ಮರ್ಡೇಶ್ವರ, ಕೊಲ್ಲೂರು ಮತ್ತು ಜೋಗ್ ಜಲಪಾತಕ್ಕೆ ಹೋಗುವ ಸಾವಿರಾರು ಪ್ರವಾಸಿಗರು ಪ್ರತಿದಿನ ಸಾಗರಕ್ಕೆ ಬರುತ್ತಾರೆ. ನಗರದಲ್ಲಿ ಸ್ವಚ್ಛತೆ ಮತ್ತು ಉತ್ತಮ ಗುಣಮಟ್ಟದ ಆಹಾರದ ವ್ಯವಸ್ಥೆ ಇದ್ದರೆ ಸಾಗರದ ಗೌರವ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹೈಟೆಕ್ ಫುಡ್ ಕೋರ್ಟ್ಗಳು ಸಹಕಾರಿಯಾಗಲಿವೆ” ಎಂದು ಅವರು ಅಭಿಪ್ರಾಯಪಟ್ಟರು.
ಮೀನು ಮಾರುಕಟ್ಟೆ ಮತ್ತು ಪಾರ್ಕ್ ಅಭಿವೃದ್ಧಿ
ಸಾಗರದ ಹಳೆಯ ಮೀನು ಮಾರುಕಟ್ಟೆಯನ್ನು ಆಧುನೀಕರಣಗೊಳಿಸಲು ಈಗಾಗಲೇ 1 ಕೋಟಿ 30 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿಸಲಾಗಿದೆ. “ಈ ಹಿಂದೆ ಸಣ್ಣ ಕಾರಣಗಳಿಗಾಗಿ ಮೀನು ಮಾರುಕಟ್ಟೆ ಕೆಲಸ ನಿಂತುಹೋಗಿತ್ತು. ಈಗ ಮುಖ್ಯಮಂತ್ರಿಗಳ ಬಳಿ ವಿಶೇಷವಾಗಿ ಅನುದಾನ ಮಂಜೂರು ಮಾಡಿಸಿದ್ದೇನೆ. ಮಾರುಕಟ್ಟೆಯ ಒಂದು ಭಾಗವನ್ನು ಮಹಿಳೆಯರಿಗೆ ಕುಳಿತುಕೊಳ್ಳಲು ಅನುಕೂಲವಾಗುವಂತೆ ಸುಂದರ ಪಾರ್ಕ್ ಆಗಿ ಪರಿವರ್ತಿಸಲಾಗುವುದು,” ಎಂದರು.
ವಿರೋಧ ಪಕ್ಷದ ಟೀಕೆಗಳಿಗೆ ತಿರುಗೇಟು
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿಗೆ ಹಣವಿಲ್ಲ ಎಂಬ ವಿರೋಧ ಪಕ್ಷಗಳ ಆರೋಪವನ್ನು ಬೇಳೂರು ಅವರು ತಳ್ಳಿಹಾಕಿದರು. “ಗ್ಯಾರಂಟಿ ಯೋಜನೆಗಳು ಬಡವರ ಬದುಕನ್ನು ಬದಲಿಸಿವೆ. ಗ್ಯಾರಂಟಿ ನಡುವೆಯೂ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆಯಿಲ್ಲ. ನಾವು ನುಡಿದಂತೆ ನಡೆಯುತ್ತಿದ್ದೇವೆ. ಸಾಗರದ ಅಭಿವೃದ್ಧಿಗೆ ಬೇಕಾದ ಎಲ್ಲಾ ಯೋಜನೆಗಳನ್ನು ನಾನು ಹಂತ ಹಂತವಾಗಿ ಪೂರೈಸುತ್ತೇನೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಾಗರ ನಗರಸಭೆಯ ಮಾಜಿ ವಿಪಕ್ಷ ನಾಯಕ ಗಣಪತಿ ಮಂಡಗಳಲೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮಾಜಿ ನಗರಸಭೆ ಸದಸ್ಯರಾದಂತ ಮಧು ಮಾಲತಿ, ಸುರೇಶ್ ಬಾಬು, ಸೈದ್ ಜಾಕೀರ್, ಲಲಿತಮ್ಮ, ರವಿ ಲಿಂಗನಮಕ್ಕಿ, ಚೇತನ್ ರಾಜ್ ಕಣ್ಣೂರು, ದಿನೇಶ್, ಲ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಸೋಮಶೇಖರ ಲಾವಿಗೆರೆ, ನಗರಸಭೆಯ ಪೌರಾಯುಕ್ತ ಹೆಚ್.ಕೆ ನಾಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…
ಸಾಗರ ನಗರ ಯೋಜನಾ ಪ್ರಾಧಿಕಾರದಲ್ಲಿ ಬಾಕಿ ಇದ್ದ 28 ಕಡತಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅನುಮೋದನೆ
ಸಾಗರದಲ್ಲಿ ರೈಲ್ವೆ ಅಂಡರ್ ಪಾಸ್ ಬದಲು ಮೇಲ್ಸೇತುವೆ ನಿರ್ಮಾಣಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಸೂಚನೆ








