ಬೆಂಗಳೂರು : ಇಡೀ ವಿಶ್ವವೇ ಮೆಚ್ಚುವ ಪ್ರಭಾವಿ ಪ್ರಧಾನಿ ಎನ್ನುವ ನರೇಂದ್ರ ಮೋದಿಯನ್ನು ವೀಕ್ ಪಿಎಂ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಹಾಸ್ಯಾಸ್ಪದವಾಗಿದೆ. ಯಾರು ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಾರೋ ಅವರು ವೀಕ್ ಇರುತ್ತಾರೆ. ಮೋದಿ ಒನ್ ಆಫ್ ದಿ ಸ್ಟ್ರಾಂಗ್ ಲೀಡರ್ ಎಂದು ಬಿಜೆಪಿ ಮಾಜಿ ಶಾಸಕ ಸಿಟಿ ರವಿ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಗೆ ಸಿಗುತ್ತಿರುವ ಜನ ಬೆಂಬಲ ಕಂಡು ಭಯದಿಂದಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ.ಸಿಎಂ ಸಿದ್ದರಾಮಯ್ಯ ಒಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ‘ನಾನು ಸ್ಟ್ರಾಂಗ್ ಸಿಎಂ, ಮೋದಿ ವೀಕ್ ಪಿಎಂ’ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ಇದಕ್ಕೆ ಉತ್ತರಿಸಿದ ಸಿಟಿ ರವಿ ಯಾರು ಸ್ಟ್ರಾಂಗ್ ಅಂತ ಹೇಳಿಕೊಳ್ಳುತ್ತಾರೋ ಅವರು ವೀಕ್ ಇರುತ್ತಾರೆ. ಮೋದಿ ಸ್ಟ್ರಾಂಗ್ ಲೀಡರ್ ಅಂತ ಅನೇಕರು ಹೇಳಿದ್ದಾರೆ. ಮೋದಿ ಈಸ್ ಅವರ್ ಲೀಡರ್ ಅಂದಿದ್ದಾರೆ. ಮೋಸ್ಟ್ ಪಾಪ್ಯುಲರ್ ಪರ್ಸನ್ ಅಂತ ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ ಎಂದರು.
ನಿಮ್ಮ ಸರ್ಕಾರದ ಪರಿಣಾಮ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ, ಮಹಿಳೆಯರ ನಗ್ನ ಮೆರವಣಿಗೆ ಆಗಿದೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ. ಹನುಮಾನ್ ಚಾಲೀಸಾ ಹಾಕಿದ್ದರಿಂದ ಗಲಾಟೆ ಆಗಿದೆ. ಆಡಳಿತ, ಕಾನೂನು ಸುವ್ಯವಸ್ಥೆ ಹಾಳಾಗಿದೆ ಅನ್ನೋದಕ್ಕೆ ಇದಕ್ಕಿಂತ ಮತ್ತೇನು ಬೇಕಿದೆ?. ಸಿಎಂ ಬದಲು, ಸೂಪರ್ ಸಿಎಂ ಆಕ್ಟಿವ್ ಆಗಿದ್ದಾರೆ. ಮುಖ್ಯಮಂತ್ರಿ ದುರ್ಬಲ ಆದಾಗ, ಶಾಡೋ ಸಿಎಂ, ಸೂಪರ್ ಸಿಎಂ ಹುಟ್ಟಿಕೊಳ್ತಾರೆ. ಸಿಎಂ ಮುಂದೆಯೇ ದಲಿತ ಸಿಎಂ ಕೂಗು ಕೇಳಿಬರುತ್ತದೆ ಅಂದರೆ ನಿಮ್ಮ ‘ನಾನೇ ಮುಖ್ಯಮಂತ್ರಿ’ ಅನ್ನೋ ಕೂಗು ಎಷ್ಟರ ಮಟ್ಟಿಗೆ ಇದೆ ನೋಡಿ ಎಂದು ಸಿ ಟಿ ರವಿ ಟೀಕಿಸಿದರು.