ಹೊಸಪೇಟೆ: ರಾಜ್ಯಕ್ಕೆ ಬರಗಾಲ ಬಂದರೂ ಕೇಂದ್ರದಿಂದ ನಮ್ಮ ಪಾಲಿನ ನಯಾಪೈಸೆ ಪರಿಹಾರದ ಹಣ ಇದುವರೆಗೂ ಬಂದಿಲ್ಲ. ಆದರೆ ರಾಜ್ಯ ಸರ್ಕಾರ 30 ಲಕ್ಷ ರೈತರ ಖಾತೆಗೆ ಮೊದಲ ಕಂತಿನ ಪರಿಹಾರದ ಹಣವನ್ನು ಜಮಾ ಮಾಡಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಐತಿಹಾಸಿಕ ಹಂಪಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ನಮ್ಮ ಗ್ಯಾರಂಟಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಳಿಂದ ಪ್ರತೀ ಕುಟುಂಬಕ್ಕೆ ಹಣ ಉಳಿತಾಯ ಆಗಿ ಬರಗಾಲದ ಸಂಕಷ್ಟದಿಂದ ಬಡ ಮತ್ತು ಮಧ್ಯಮ ವರ್ಗದವರನ್ನು ಪಾರು ಮಾಡಿದೆ ಎಂದರು.
ನಮ್ಮ ಕಾರ್ಯಕ್ರಮಗಳು ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವ ಮತ್ತು ಮಧ್ಯಮ ವರ್ಗದವರಿಗೆ ತಲುಪುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದ ವೈಭವ ಪುನಃ ರಾಜ್ಯದಲ್ಲಿ ಮರುಕಳಿಸಬೇಕು ಎನ್ನುವುದು ನಮ್ಮ ಸರ್ಕಾರದ ಆಶಯ ಎಂದು ತಿಳಿಸಿದರು.
ವಿಜಯನಗರ ಸಾಮ್ರಾಜ್ಯದ ವೈಭವವನ್ನು ಇತಿಹಾಸಕಾರ ಅಬ್ದುಲ್ ರಜಾಕ್ ಚಿತ್ರಿಸಿದ್ದಾರೆ, ಇತಿಹಾಸದ ಅರಿವು ಪ್ರತಿಯೊಬ್ಬರಿಗೂ ಅಗತ್ಯ. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲಾರರು. ಎಂದರು.
ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಕಟ್ಟುವ ಎರಡನೇ ದೊಡ್ಡ ರಾಜ್ಯ ಆಗಿದೆ. ವರ್ಷಕ್ಕೆ 4 ಲಕ್ಷ ಕೋಟಿ ತೆರಿಗೆಯನ್ನು ಕನ್ನಡಿಗರು ಕಟ್ಟುತ್ತಾರೆ. ಆದರೆ ಕೇಂದ್ರದಿಂದ ರಾಜ್ಯಕ್ಕೆ ವಾಪಾಸ್ ಬರುವುದು ಕೇವಲ 50 ಸಾವಿರ ಕೋಟಿ. 15ನೇ ಹಣಕಾಸು ಆಯೋಗದಲ್ಲೂ ರಾಜ್ಯಕ್ಕೆ ತೀವ್ರ ಅನ್ಯಾಯ ಆಗಿದೆ. ಈ ಅನ್ಯಾಯವನ್ನು ವಿರೋಧಿಸಿ ಫೆ.7 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದು ಕರ್ನಾಟಕ ಮತ್ತು ಕನ್ನಡಿಗರ ಹಕ್ಕನ್ನು ಕೇಳಲು, ನಮ್ಮ ಪಾಲನ್ನು ನಮಗೆ ಕೊಡಿ ಎಂದು ಕೇಳಲು ನಡೆಸುತ್ತಿರುವ ಪ್ರತಿಭಟನೆ ಎಂದು ತಿಳಿಸಿದರು.