ಬೆಳಗಾವಿ : ಮುಡಾ ಹಗರಣದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಸಿಎಂ ಸಿದ್ದರಾಮಯ್ಯ ಅವರು ಇಂದು ಬೆಳಗಾವಿ ಜಿಲ್ಲೆಯ ಸೌದತ್ತಿ ತಾಲೂಕಿನ ಶ್ರೀ ರೇಣುಕಾ ಎಲ್ಲಮ್ಮ ದೇವಿ ದರ್ಶನ ಪಡೆದುಕೊಂಡರು. ಇದೆ ವೇಳೆ ಪತ್ನಿ ಪಾರ್ವತಿ ಹೆಸರಿನಲ್ಲಿ ವಿಶೇಷ ಪೂಜೆ ಹಾಗೂ ಅರ್ಚನೆ ಮಾಡಿಸಿದರು.
ಹೌದು ಇಂದು ಸಿಎಂ ಸಿದ್ದರಾಮಯ್ಯ ರೇಣುಕಾ ಎಲ್ಲಮ್ಮ ದೇವಿ ದರ್ಶನ ಪಡೆದುಕೊಂಡರು. ಎಲ್ಲಮ್ಮನ ಗುಡಿಯಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಲ್ಲಿ ಅರ್ಚನೆ ಮಾಡಿಸಿದರು. ಪಾರ್ವತಿ ಹೆಸರಿನಲ್ಲಿ ವಿಶೇಷ ಅರ್ಚನೆ ಮಾಡಿಸಿದರು. ಬಳಿಕ ಆರತಿ ಮುಗಿಯುವವರೆಗೂ ಗರ್ಭಗುಡಿಯಲ್ಲಿಯ ನಿಂತು ಸಿಎಂ ಸಿದ್ದರಾಮಯ್ಯ ಎಲ್ಲಮ್ಮ ದೇವಿಯ ದರ್ಶನ ಪಡೆದರು.ಈ ವೇಳೆ ಆರತಿ ತಟ್ಟೆಗೆ 500 ರೂಪಾಯಿ ದಕ್ಷಿಣೆ ಹಾಕಿದರು. ಅಲ್ಲದೆ ಹಣೆಗೆ ತಾವೇ ಕುಂಕುಮ ಹಚ್ಚಿಕೊಂಡರು.
ಈ ಸಂದರ್ಭದಲ್ಲಿ ಸಿಎಂ ತಲೆಯ ಮೇಲೆ ಅರ್ಚಕರು ನಾಗಮುದ್ರಿಕೆ ಇಟ್ಟು ಆಶೀರ್ವದಿಸಿದರು. ನಂತರ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗರ್ಭಗುಡಿಯಲ್ಲಿಯೇ ಸಾಷ್ಟಾಂಗ ನಮಸ್ಕಾರ ಹಾಕಿದರು. ಬಳಿಕ ಎಲ್ಲಮ್ಮ ದೇವಿ ಸನ್ನಿಧಾನದಲ್ಲಿ ಶಾಸಕ ವಿಶ್ವಾಸ ವೈದ್ಯ ಸಿಎಂ ಹಾಗೂ ಡಿಸಿಎಂ ಗೆ ಹೂವಿನ ಹಾರ ಹಾಗೂ ಶಾಲು ಹೊದಿಸಿ ಸನ್ಮಾನಿಸಿದರು.ಇದೆ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದಂತಹ ಲಕ್ಷ್ಮಿ ಹೆಬ್ಬಾಳಕಾರ, ಎಚ್ ಕೆ ಪಾಟೀಲ್, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ನಾಯಕರು ಸಾಥ್ ನೀಡಿದರು.
ಸೌದತ್ತಿ ರೇಣುಕಾ ಎಲ್ಲಮ್ಮ ದೇವಿಯ ದರ್ಶನ ಪಡೆದು ಸಿಎಂ ಸಿದ್ದರಾಮಯ್ಯ ಹೊರಬರುವಾಗ ಮನವಿ ಕೊಡಲು ಬಂದ ವ್ಯಕ್ತಿಗೆ ಥೂ ಎಂದ ಪ್ರಸಂಗ ನಡೆಯಿತು. 3 ಡಿಸಿಗಳು ಬದಲಾದರೂ ಇನ್ನೂ ನನ್ನ ಕೆಲಸ ಆಗಿಲ್ಲ ಎಂದು ಆ ವ್ಯಕ್ತಿ ಮನವಿ ಕೊಡಲು ಬಂದಾಗ ನಾವು ಈಗ ಎಲ್ಲಿದ್ದೇವೆ ಎಂದು ಗೊತ್ತಾಗಲ್ವಾ ಎಂದು ಗದರಿ ಮುಂದೆ ಸಾಗಿದರು.