ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಲಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಮೇಲೆ ಭಾರಿ ನಿರೀಕ್ಷೆಗಳು ಮೂಡಿವೆ. ಈ ಬಾರಿ ಬಜೆಟ್ ಗಾತ್ರ ಸುಮಾರು 4.50 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪುವ ಸಾಧ್ಯತೆಯಿದ್ದು, ಮಹಿಳೆಯರು ಮತ್ತು ಬಡ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ.
ಪ್ರಮುಖ ನಿರೀಕ್ಷಿತ ಘೋಷಣೆಗಳು:
ಗೃಹಲಕ್ಷ್ಮಿಯರಿಗೆ ಸೀರೆ ಭಾಗ್ಯ: ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ತಿಂಗಳು 2,000 ರೂ. ಪಡೆಯುತ್ತಿರುವ 1.24 ಕೋಟಿ ಮಹಿಳೆಯರಿಗೆ ಹೆಚ್ಚುವರಿಯಾಗಿ ವರ್ಷಕ್ಕೆ ಎರಡು ಸೀರೆ ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಘೋಷಿಸುವ ಸಾಧ್ಯತೆಯಿದೆ. ಇದನ್ನು ಸಹಕಾರ ಸಂಘಗಳ ಮೂಲಕ ವಿತರಿಸಲು ಚಿಂತನೆ ನಡೆಸಲಾಗಿದೆ.
ಇಂದಿರಾ ಆಹಾರ ಕಿಟ್: ಅನ್ನಭಾಗ್ಯ ಯೋಜನೆಯಡಿ ಸದ್ಯ ನೀಡಲಾಗುತ್ತಿರುವ 10 ಕೆ.ಜಿ ಅಕ್ಕಿಯಲ್ಲಿ 5 ಕೆ.ಜಿ ಅಕ್ಕಿಯನ್ನು ಕಡಿತಗೊಳಿಸಿ, ಅದರ ಬದಲಿಗೆ ತೊಗರಿಬೇಳೆ, ಹೆಸರುಕಾಳು, ಸಕ್ಕರೆ, ಉಪ್ಪು ಮತ್ತು ಅಡುಗೆ ಎಣ್ಣೆಯನ್ನು ಒಳಗೊಂಡ ‘ಇಂದಿರಾ ಆಹಾರ ಕಿಟ್’ ನೀಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.
ವಸತಿ ಹಂಚಿಕೆ ಗೊಂದಲಕ್ಕೆ ತೆರೆ: ಸಮಾಜದ ಹಿಂದುಳಿದ ವರ್ಗಗಳಿಗೆ ವಸತಿ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ‘ಆಶ್ರಯ’ ಸೇರಿದಂತೆ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮನೆ ಹಂಚಿಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಹೊಸ ಯೋಜನೆ ಘೋಷಣೆಯಾಗುವ ನಿರೀಕ್ಷೆಯಿದೆ.
ಕೃಷ್ಣಾ ಮೇಲ್ದಂಡೆ ಯೋಜನೆ: ಉತ್ತರ ಕರ್ನಾಟಕದ ಭಾಗ್ಯವಿಧಾಯಿನಿ ಎನಿಸಿದ ಕೃಷ್ಣಾ ಮೇಲ್ದಂಡೆ ಯೋಜನೆಗೆ ಭೂಸ್ವಾಧೀನಕ್ಕಾಗಿ ಸುಮಾರು 8 ರಿಂದ 15 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವ ಸಾಧ್ಯತೆಯಿದೆ.








