ನವದೆಹಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 3 ದಿನಗಳ ಕಾಲ ದೆಹಲಿ ಪ್ರವಾಸ ಕೈಗೊಂಡಿದ್ದು, ನಿನ್ನೆ ರಾಜ್ಯದ ನೂತನ ಸಂಸದರ ಜೊತೆಗೆ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ನಾಳೆ 3ನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾದ ನರೇಂದ್ರ ಮೋದಿ ಅವರು ಸೇರಿದಂತೆ ಹಲವು ನಾಯಕರನ್ನು ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ.
ಪ್ರಧಾನಿಗಳು ಶನಿವಾರ ಭೇಟಿ ಮಾಡಲು ಸಮಯ ಕೊಟ್ಟಿದ್ದಾರೆ. ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಸಹ ಭೇಟಿಗೆ ಸಮಯ ನೀಡಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ಅವರನ್ನು ಭೇಟಿ ಮಾಡಲಾಗುವುದು. ಗೃಹ ಸಚಿವ ಅಮಿತ್ ಶಾ ಅವರ ಸಮಯಾವಕಾಶವನ್ನು ಕೇಳಿದ್ದು, ಇನ್ನೂ ಸಮಯ ಕೊಟ್ಟಿಲ್ಲ. ಶೀಘ್ರದಲ್ಲಿಯೇ ಸಮಯ ನೀಡಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಸೇರಿದಂತೆ ಇತರೆ ವಿಚಾರಗಳ ಕುರಿತು ಚರ್ಚಿಸುವ ಸಂಬಂಧ ಶನಿವಾರ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗಿದ್ದು, ಕೇಂದ್ರದ ವಿವಿಧ ಇಲಾಖೆಗಳ ಸಚಿವರನ್ನು ಸಹ ಭೇಟಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.