ಮೈಸೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾಗದಂತ ಕಾಲ್ತುಳಿತ ದುರಂತವು ತುಂಬಾ ನೋವು ತಂದಿದೆ ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವುಕ ನುಡಿಯಾಡಿದ್ದಾರೆ.
ಇಂದು ಮೈಸೂರಿನಲ್ಲಿ ಮಾತನಾಡಿದಂತ ಅವರು, ಆ ಕಾರ್ಯಕ್ರಮದ ಸ್ಥಳದಲ್ಲಿ ಪೊಲೀಸ್ ಭದ್ರತಾ ವ್ಯವಸ್ಥೆ ಬಗ್ಗೆ ಪೊಲೀಸ್ ಇಲಾಖೆಯಿಂದ ಸಮಗ್ರ ಮಾಹಿತಿ ಕೊಟ್ಟಿರಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಸರ್ಕಾರಿ ಕಾರ್ಯಕ್ರಮವಾಗಿರಲಿಲ್ಲ ಹಾಗೂ ಇದಕ್ಕೆ ನನಗೆ ಆಹ್ವಾನವೂ ಇರಲಿಲ್ಲ. ಬಿಜೆಪಿ ಹಾಗೂ ಜೆಡಿಎಸ್ ನವರು ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಮಧ್ಯಾಹ್ನ 3.50 ಕ್ಕೆ ಗಾಯಗೊಂಡವರು ಆಸ್ಪತ್ರೆಯಲ್ಲಿ ದಾಖಲಾಗಿದ್ದರೂ, ನನಗೆ ಸಂಜೆ 5.45 ಕ್ಕೆ ಕ್ರೀಡಾಂಗಣದ ಬಳಿ ಕಾಲ್ತುಳಿತ ಉಂಟಾಗಿ, ಜನರು ಮೃತಪಟ್ಟಿರುವ ಮಾಹಿತಿ ದೊರೆಯಿತು. ಕಾಲ್ತುಳಿತದ ಘಟನೆ ಘಟಿಸಬಾರದಿತ್ತು. ಬಹಳ ಬೇಸರ ತಂದಿದೆ ಎಂದರು.
ಕಾಲ್ತುಳಿತ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ
ಈ ಪ್ರಕರಣದಲ್ಲಿ ಪೊಲೀಸರನ್ನು ಬಲಿಪಶು ಮಾಡಲಾಗಿದೆ ಎಂದು ಸಮಾಜಿಕ ಜಾಲತಾಣಗಳಲ್ಲಿ ಕೂಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಪೊಲೀಸ್ ಇಲಾಖೆಯ ಐದು ಅಧಿಕಾರಿಗಳನ್ನು ಅಮಾನತ್ತುಗೊಳಿಸಲಾಗಿದೆ. ಗುಪ್ತಚರ ಮುಖ್ಯಸ್ಥರನ್ನು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನು ಬದಲಾಯಿಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ತಪ್ಪು ಮಾಡಿಲ್ಲ. ಆದರೆ ಘಟನೆ ದು:ಖ ತಂದಿದೆ ಎಂದರು.