ಬೆಂಗಳೂರು: ಸಿಎಂ ಸಿದ್ಧಾರಮಯ್ಯ ಅವರು ಲೋಕಸಭಾ ಚುನಾವಣೆ ಹೊತ್ತಿನಲ್ಲೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಸುಧೀರ್ಘವಾದಂತ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅವರು ಎತ್ತಿರುವಂತ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಅಂತ ನೋಡಬೇಕಿದೆ. ಆ ಬಗ್ಗೆ ಮುಂದೆ ಓದಿ.
ಹಿಂದುಳಿದ ಜಾತಿ ಮತ್ತು ದಲಿತರ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಹೊರಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುತ್ತಿರುವ ಹಸಿ ಸುಳ್ಳು ಅವರ ಅಜ್ಞಾನವನ್ನಷ್ಟೇ ಅಲ್ಲ ಸೋಲಿನ ಭೀತಿಯಲ್ಲಿರುವ ಅವರ ಹತಾಶೆಯನ್ನೂ ಸೂಚಿಸುತ್ತದೆ. ದೇಶದಲ್ಲಿ ಇಲ್ಲಿಯ ವರೆಗಿನ ಯಾರೂ ಕೂಡಾ ಪ್ರಧಾನಿ ಪಟ್ಟವನ್ನು ಇಂತಹ ಕೀಳು ಮಟ್ಟಕ್ಕೆ ಇಳಿಸಿಲ್ಲ.
ಜವಾಬ್ದಾರಿ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಒಂದೋ ಈ ಬೇಜವಾಬ್ದಾರಿತನದ ಆರೋಪವನ್ನು ಆಧಾರಗಳನ್ನು ನೀಡಿ ಸಾಬೀತುಪಡಿಸಬೇಕು ಇಲ್ಲದೆ ಇದ್ದರೆ ದೇಶದ ಜನರ ಕ್ಷಮೆ ಕೇಳಬೇಕು.
ಹಿಂದುಳಿದ ಜಾತಿ ಮತ್ತು ಎಸ್ ಸಿ / ಎಸ್ ಟಿ ಮೀಸಲಾತಿಯನ್ನು ಕಿತ್ತು ಮುಸ್ಲಿಮರಿಗೆ ನೀಡುವುದಾಗಿ ಕಾಂಗ್ರೆಸ್ ಎಲ್ಲಿ ಹೇಳಿದೆ? ಯಾವ ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡಿದೆ? ಅದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶದ ಪತ್ರ ಇದೆಯೇ? ಈ ಎಲ್ಲ ವಿವರವನ್ನು ಪ್ರಧಾನಿಯವರು ದೇಶದ ಮುಂದೆ ಇಡಬೇಕು.
ಸಂವಿಧಾನದತ್ತವಾದ ಮೀಸಲಾತಿಯನ್ನು ಮನಬಂದಂತೆ ಬದಲಾವಣೆ ಮಾಡಲು ಸಾಧ್ಯ ಇಲ್ಲ. ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿ ಆಧಾರದಲ್ಲಿ ಮಾತ್ರ ಮೀಸಲಾತಿಯ ಪರಿಷ್ಕರಣೆ ಸಾಧ್ಯ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಪರಿಷ್ಕರಿಸುವ ಅಧಿಕಾರ ರಾಜ್ಯ ಸರ್ಕಾರದ ಕೈಯಲ್ಲಿಯೂ ಇಲ್ಲ. ಇದಕ್ಕಾಗಿ ಸಂಸತ್‌ನ ಉಭಯ ಸದನಗಳ ಒಪ್ಪಿಗೆಯೊಂದಿಗೆ ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಇಂತಹದ್ದೊಂದು ಕನಿಷ್ಠ ಜ್ಞಾನ ಒಬ್ಬ ಪ್ರಧಾನಮಂತ್ರಿಗೆ ಇಲ್ಲದಿರುವುದು ಈ ದೇಶದ ದುರಂತವೇ ಸರಿ.
ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಿದ ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧಾರದಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಯನ್ನು ಗಮನಕ್ಕೆ ತೆಗೆದುಕೊಂಡು ಮುಸ್ಲಿಮರನ್ನು ಹಿಂದುಳಿದ ಜಾತಿಗಳ 2ಬಿ ವರ್ಗಕ್ಕೆ ಸೇರಿಸಲಾಗಿರುವುದು ನಿಜ. ಕಳೆದ ಮೂರು ದಶಕಗಳಿಂದ ರಾಜ್ಯದಲ್ಲಿ ಈ ಮೀಸಲಾತಿ ಜಾರಿಯಲ್ಲಿದೆ. ಕೇಂದ್ರದಲ್ಲಿ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವಾಗಲಿ, ಕಳೆದ ಹತ್ತು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರವಾಗಲಿ ಇಲ್ಲಿಯ ವರೆಗೆ ಈ ಮೀಸಲಾತಿಯನ್ನು ಪ್ರಶ್ನಿಸಿಲ್ಲ. ಬಿಜೆಪಿಯೂ ಸೇರಿದಂತೆ ಯಾರೂ ಕೂಡಾ ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಿಲ್ಲ.
ಕಳೆದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಧರ್ಮದ ಆಧಾರದಲ್ಲಿ ಮತವಿಭಜನೆಯ ಏಕೈಕ ದುರುದ್ದೇಶದಿಂದ ಬಸವರಾಜ ಬೊಮ್ಮಾಯಿ ಸರ್ಕಾರ ಮೀಸಲಾತಿಯನ್ನು ಅಡ್ಡಾದಿಡ್ಡಿಯಾಗಿ ಪರಿಷ್ಕರಿಸಲು ಹೊರಟು ಸುಪ್ರೀಂ ಕೋರ್ಟಿನಿಂದ ಛೀಮಾರಿಗೆ ಗುರಿಯಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮರೆತಂತೆ ಕಾಣುತ್ತಿದೆ. ಮುಸ್ಲಿಮರಿಗೆ ಇದ್ದ ಶೇಕಡಾ ನಾಲ್ಕರ ಮೀಸಲಾತಿಯನ್ನು ರದ್ದು ಮಾಡಿ ಅದನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಿರುವ ತೀರ್ಮಾನಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ್ದು ಮುಂದಿನ ಆದೇಶದ ವರೆಗೆ ಪರಿಷ್ಕೃತ ಮೀಸಲಾತಿಯನ್ನು ಜಾರಿಗೊಳಿಸಬಾರದೆಂದು ಆದೇಶ ನೀಡಿದೆ. ಇಂತಹದ್ದೊಂದು ಪ್ರಮುಖ ಮಾಹಿತಿ ಕೂಡಾ ಪ್ರಧಾನಮಂತ್ರಿಯವರ ಗಮನದಲ್ಲಿ ಇಲ್ಲದೆ ಇರುವುದು ವಿಷಾದನೀಯ.
ರಾಜ್ಯದಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಹದಿನೈದರಿಂದ ಹದಿನೇಳಕ್ಕೆ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಮೂರರಿಂದ ಐದಕ್ಕೆ ಹೆಚ್ಚಿಸುವುದಾಗಿ ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೂ ಪತ್ರ ಬರೆದಿರುವುದಾಗಿಯೂ ತಿಳಿಸಿತ್ತು. ಆದರೆ ಇಂತಹ ಯಾವ ಪತ್ರ ಕೂಡಾ ರಾಜ್ಯದ ಬಿಜೆಪಿ ಸರ್ಕಾರದಿಂದ ತಮಗೆ ಬಂದಿಲ್ಲ. ಆ ರೀತಿಯ ಮೀಸಲಾತಿ ಏರಿಕೆಯ ಪ್ರಸ್ತಾವ ತಮ್ಮ ಪರಿಶೀಲನೆಯಲ್ಲಿ ಇಲ್ಲ ಎಂದು 2023ರ ಮಾರ್ಚ್ 14ರಂದು ಕೇಂದ್ರ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ನಾರಾಯಣ ಸ್ವಾಮಿ ಅವರೇ ಲೋಕಸಭೆಗೆ ತಿಳಿಸಿದ್ದರು. ಸರ್ಕಾರದ ಈ ನಿರ್ಧಾರ ಪ್ರಧಾನಿ ನರೇಂದ್ರಮೋದಿ ಅವರ ಗಮನಕ್ಕೆ ಬಂದಿರಲಿಲ್ಲವೇ?
ಕಳೆದ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದರೂ ತಮ್ಮ ಸಾಧನೆಯ ಬಗ್ಗೆ ಹೇಳಲು ಏನೂ ಇಲ್ಲದಿರುವುದು ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ವಿಫಲ ಪ್ರಧಾನಿ ಎನ್ನುವುದನ್ನು ಸಾಬೀತುಪಡಿಸಿದೆ. ಒಬ್ಬ ಅನಕ್ಷರಸ್ಥ ಮಾತ್ರ ಈ ರೀತಿಯ ಆಧಾರ ರಹಿತ ಆರೋಪಗಳನ್ನು ಮಾಡಲು ಸಾಧ್ಯ. ಪ್ರಧಾನಿಯವರು ಸ್ವಯಂ ಪ್ರದರ್ಶಿಸುತ್ತಿರುವ ಅಜ್ಞಾನವನ್ನು ನೋಡಿದರೆ ಇವರ ಪದವಿ ಶಿಕ್ಷಣದ ಬಗೆಗಿನ ಸಂಶಯಗಳು ನಿಜ ಇರುವಂತೆ ಕಾಣಿಸುತ್ತದೆ.
ಮುಸ್ಲಿಮ್ ಮೀಸಲಾತಿಯನ್ನು ವಿರೋಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಬಗ್ಗೆ ಮೋದಿಯವರ ಆಪ್ತಮಿತ್ರ ಮತ್ತು ಬಿಜೆಪಿಯ ಹೊಸ ಸಂಗಾತಿಯಾಗಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿದುಕೊಳ್ಳಬಯಸುತ್ತೇನೆ.
ಕರ್ನಾಟಕದಲ್ಲಿ ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಿದ್ದೇ ನಾನು ಎಂದು ಕೊಚ್ಚಿಕೊಳ್ಳುತ್ತಿದ್ದ ದೇವೇಗೌಡರು ಈಗಲೂ ತಮ್ಮ ನಿಲುವಿಗೆ ಬದ್ಧರಾಗಿದ್ದಾರಾ? ಇಲ್ಲವೇ ನರೇಂದ್ರ ಮೋದಿಯವರಿಗೆ ಶರಣಾಗಿ ತಮ್ಮ ಹಿಂದಿನ ನಿಲುವನ್ನು ಬದಲಾಯಿಸಿಕೊಳ್ಳುತ್ತರಾ? ಎಂಬುದನ್ನು ಅವರು ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು ಎಂದಿದ್ದಾರೆ.
‘ನಾನು ಆ ರೀತಿ ಹೇಳಿಲ್ಲ’ : ಸಂಪತ್ತಿನ ಮರುಹಂಚಿಕೆ ವಿವಾದದ ಕುರಿತು ‘ರಾಹುಲ್ ಗಾಂಧಿ’ ಸ್ಪಷ್ಟನೆ
“ಪಾಶ್ಚಿಮಾತ್ಯ ಮಾಧ್ಯಮಗಳು ತಮ್ಮನ್ನು ಭಾರತದ ಚುನಾವಣೆಯ ಭಾಗವೆಂದು ಭಾವಿಸುತ್ವೆ” : ಜೈಶಂಕರ್ ತಿರುಗೇಟು