ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ಆಯವ್ಯಯವು ‘ನವ ಕರ್ನಾಟಕ’ ನಿರ್ಮಾಣದ ಆಶಯವನ್ನು ಹೊಂದಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಹಾಗೂ ಶಾಸಕ ದಿನೇಶ್ ಗೂಳಿಗೌಡ ಬಣ್ಣಿಸಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದಷ್ಟೇ ಅಲ್ಲದೆ, ಹೊಸ ಅಭಿವೃದ್ಧಿ ಯೋಜನೆಗಳಿಗೆ ಒತ್ತು ನೀಡಲಾಗಿದೆ. ವಿಶೇಷವಾಗಿ ಗ್ಯಾರಂಟಿ ಯೋಜನೆಗಳಿಗಾಗಿ 51 ಸಾವಿರ ಕೋಟಿ ರೂ.ಗಳನ್ನು ಮೀಸಲಿಡುವ ಮೂಲಕ, “ಸರ್ಕಾರ ಗ್ಯಾರಂಟಿಗಳನ್ನು ನಿಲ್ಲಿಸುತ್ತದೆ” ಎಂಬ ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ತಕ್ಕ ಉತ್ತರ ನೀಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದು ಕೇವಲ ಘೋಷಣೆಗಳ ಬಜೆಟ್ ಆಗಿರದೆ ರೈತರು, ಶ್ರಮಿಕ ವರ್ಗ ಹಾಗೂ ಯುವಜನತೆ ಸೇರಿದಂತೆ ಸಮಾಜದ ಎಲ್ಲಾ ವರ್ಗದವರನ್ನು ಒಳಗೊಂಡ ಸಮಗ್ರ ಮತ್ತು ಜನಪರ ಬಜೆಟ್ ಆಗಿದೆ. ರಾಜ್ಯದ ಆರ್ಥಿಕ ಶಿಸ್ತನ್ನು ಕಾಪಾಡುತ್ತಲೇ ಬಡವರ ಪರವಾದ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿರುವುದು ಈ ಬಜೆಟ್‌ನ ವೈಶಿಷ್ಟ್ಯ ಎಂದು ದಿನೇಶ್ ಗೂಳಿಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.








