ಬೆಂಗಳೂರು: ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮೀ ಯೋಜನೆ ಅತ್ಯಂತ ದೊಡ್ಡ ಯೋಜನೆಯಾಗಿದ್ದು, ಇದನ್ನು ಜಾರಿಗೆ ತರುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಾಕಷ್ಟು ಶ್ರಮ ಹಾಕಿದ್ದಾರೆ. ಇದರ ರೂವಾರಿ ಅವರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ಲಾಘಿಸಿದರು.
ನಾನು ಇಟ್ಟ ನಂಬಿಕೆಯನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸಮರ್ಥವಾಗಿ ನಿಭಾಯಿಸಿದ ಫಲವಾಗಿ ಇಂದು ರಾಜ್ಯದ 1.26 ಕೋಟಿ ಗೃಹಣಿಯರಿಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಸಂದಾಯವಾಗುತ್ತಿದ್ದು, ಈ ಯೋಜನೆಗೆ ವಾರ್ಷಿಕ 33 ಸಾವಿರ ಕೋಟಿ ಮೀಸಲಿಡಲಾಗುತ್ತಿದೆ. ಇದರ ಸಂಪೂರ್ಣ ಕ್ರೆಡಿಟ್ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರಿಗೆ ಸಲ್ಲಬೇಕು ಎಂದರು.
ಇದೇ ವೇಳೆ ಮಾತನಾಡಿದಂತ ಲಕ್ಷ್ಮೀ ಹೆಬ್ಬಾಳ್ಕರ್, ನನಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜವಾಬ್ದಾರಿ ನೀಡಿ, ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲೇ ಅತೀ ದೊಡ್ಡದಾಗಿರುವ ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುವ ಭಾಗ್ಯವನ್ನು, ಅವಕಾಶವನ್ನು ಒದಗಿಸಿಕೊಟ್ಟ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯವರಿಗೆ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅವರು ಈ ಅವಕಾಶ ನೀಡಿರದಿದ್ದರೆ ಇಂದು ನನಗೆ ಈ ಪ್ರಶಸ್ತಿ ಪಡೆಯುವ ಅವಕಾಶ ಬರುತ್ತಲೇ ಇರಲಿಲ್ಲ ಎಂದರು.
ಸುಮಾರು 70 ವರ್ಷಗಳ ಇತಿಹಾಸ ಹೊಂದಿರುವ ಬೆಂಗಳೂರು ಪ್ರೆಸ್ ಕ್ಲಬ್ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತ ಬಂದಿರುವುದನ್ನು ಕೇಳಿದ್ದೇನೆ. ಪ್ರೆಸ್ ಕ್ಲಬ್ ಪ್ರತಿಷ್ಠಿತ ಪ್ರಶಸ್ತಿ ಪಡೆಯುವ ಸೌಭಾಗ್ಯ ನನಗೆ ಒದಗಿ ಬಂದಿದೆ. ಇದರಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಗೃಹಲಕ್ಷ್ಮೀ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಿದ್ದನ್ನು ಗುರುತಿಸಿ, ಎಲ್ಲ ಮಾಧ್ಯಮಗಳ ಪ್ರಾತಿನಿಧಿಕ ಸಂಸ್ಥೆಯಾಗಿರುವ ಪ್ರೆಸ್ ಕ್ಲಬ್ ಇಂತಹ ಪ್ರಶಸ್ತಿಯನ್ನು ಕೊಡುತ್ತಿರುವುದು, ಅದನ್ನು ಸ್ವೀಕರಿಸುತ್ತಿರುವುದು ನನ್ನ ಜೀವನದಲ್ಲಿ ಎಂದೂ ಮರೆಯಲಾರದ ಸಂದರ್ಭ ಎಂದೇ ಭಾವಿಸುತ್ತೇನೆ ಎಂದರು.
ಪ್ರತಿ ನಿತ್ಯ ಎಲ್ಲೇ ಹೋದರೂ ಮಾಧ್ಯಮ ಪ್ರತಿನಿಧಿಗಳು ನನ್ನ ಮುಂದೆ ಮೈಕ್ ಹಿಡಿದು ಮೇಡಂ ಗೃಹಲಕ್ಷ್ಮೀ ಹಣ ಯಾವಾಗ ಹಾಕ್ತೀರಿ, ಮೇಡಮ್ 2 ತಿಂಗಳ ಗೃಹಲಕ್ಷ್ಮೀ ಹಣ ಬಂದಿಲ್ಲ, ಮೇಡಮ್ ಗೃಹಲಕ್ಷ್ಮೀ ಯೋಜನೆ ನಿಲ್ಲಿಸ್ತೀರಂತೆ ನಿಜಾನಾ, ಮೇಡಮ್ ಗೃಹಲಕ್ಷ್ಮೀ ಹಣ ಅವರಿಗೆ ಬಂದಿಲ್ಲ, ಇವರಿಗೆ ಬಂದಿಲ್ಲ… ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸುತ್ತಿದ್ದರು. ವಿರೋಧ ಪಕ್ಷಗಳ ವ್ಯಾಪಕ ಟೀಕೆಗಳ ನಡುವೆಯೂ ಗೃಹಲಕ್ಷ್ಮೀ ಯೋಜನೆ ಇಂದು ಯಶಸ್ವಿಯಾಗಿದೆ ಎಂದು ಸಚಿವರು ತಿಳಿಸಿದರು.
ಎಲ್ಲ ಸವಾಲುಗಳನ್ನೂ ಎದುರಿಸಿ, ಈಗ 15 ತಿಂಗಳುಗಳ ಕಾಲ ನಿರಂತರ ಯಶಸ್ವಿಯಾಗಿ 1.26 ಕೋಟಿ ಮಹಿಳೆಯರ ಖಾತೆಗೆ ಹಣ ಜಮಾ ಆಗಿದೆ. ಜೊತೆಗೆ, ರಾಜ್ಯದ ಮೂಲೆ ಮೂಲೆಗಳಿಂದ ಗೃಹ ಲಕ್ಷ್ಮೀ ಯೋಜನೆಯ ಸದುಪಯೋಗದ ಸುದ್ದಿಗಳು ದಿನನಿತ್ಯ ಬರತೊಡಗಿವೆ. ಗೃಹಲಕ್ಷ್ಮೀ ಯೋಜನೆ ಕೋಟ್ಯಂತರ ಮಹಿಳೆಯರ ಪಾಲಿಗೆ ಸಂಜೀವಿನಿಯಾಗಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಮಾಧ್ಯಮಗಳ ಈ ರೀತಿಯ ಪ್ರೋತ್ಸಾಹಿಸುವ, ಒಳ್ಳೆಯ ಕೆಲಸವನ್ನು ಗುರುತಿಸುವ ಕೆಲಸ ಮುಂದುವರಿಯಲಿ, ಆಗಲೇ ನಮಗೂ ಇನ್ನಷ್ಟು ಉತ್ತಮ ಕೆಲಸ ಮಾಡುವುದಕ್ಕೆ ಉತ್ಸಾಹ ಬರುತ್ತದೆ ಎಂದು ಹೇಳಿದರು.
ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೆ.ಜೆ.ಜಾರ್ಜ್, ಎಂ.ಬಿ.ಪಾಟೀಲ್, ಕೆ.ಎಚ್.ಮುನಿಯಪ್ಪ, ಶಾಸಕ ರಿಜ್ವಾನ್ ಅರ್ಷದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಜೀರ್ ಅಹಮದ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷರಾದ ಆಯೇಷಾ ಖಾನಂ, ಪ್ರೆಸ್ ಕ್ಲಬ್ ಅಧ್ಯಕ್ಷರಾದ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ, ಪದಾಧಿಕಾರಿಗಳು, ಪ್ರಶಸ್ತಿ ಪುರಸ್ಕೃತರು ಉಪಸ್ಥಿತರಿದ್ದರು.
ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ ಟೀಕಿಸಿದರೆ ‘ಐ ಡೋಂಟ್ ಕೇರ್’: ಸಿಎಂ ಸಿದ್ಧರಾಮಯ್ಯ ಖಡಕ್ ತಿರುಗೇಟು
SHOCKING : ಪೊಲೀಸ್ ಉದ್ಯೋಗ ನೇಮಕಾತಿ ಪರೀಕ್ಷೆ : `ಮುನ್ನಾಭಾಯಿ MBBS’ ಸಿನಿಮಾ ರೀತಿ ಕಾಪಿ ಮಾಡಿದ ಅಭ್ಯರ್ಥಿ.!