ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮನೆ ಮತ್ತು ಬೆಳೆ ಹಾನಿಗೀಡಾದವರಿಗೆ ತಕ್ಷಣ ಪರಿಹಾರವನ್ನು ಒದಗಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಸೋಮವಾರ ಬೆಳಗಾವಿ ಜಿಲ್ಲೆಯ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಜೂನ್‌ನಿಂದ ಇದುವರೆಗೆ 565 ಮಿ.ಮೀ ಮಳೆಯಾಗಿದ್ದು, ವಾಡಿಕೆಗಿಂತ ಶೇ.62ರಷ್ಟು ಹೆಚ್ಚು ಮಳೆಯಾಗಿದೆ. ಅತಿವೃಷ್ಟಿಯಿಂದ 6ಮಂದಿ ಸಾವಿಗೀಡಾಗಿದ್ದು, ಎಲ್ಲಾ ಪ್ರಕರಣಗಳಲ್ಲಿ ಪರಿಹಾರ ಒದಗಿಸಲಾಗಿದೆ. 12 ಜಾನುವಾರುಗಳು ಸಾವನ್ನಪ್ಪಿದ್ದು, ಪರಿಹಾರ ಒದಗಿಸಲಾಗಿದೆ. ಸಾವಿಗೀಡಾದ ಒಂದು ಜಾನುವಾರಿಗೆ 37,500 ರೂಪಾಯಿ ಪರಿಹಾರ ನೀಡಲಾಗುತ್ತಿದೆ.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ 48 ಮನೆಗಳು ಪೂರ್ಣ ಹಾನಿಗೀಡಾಗಿದ್ದು, 950 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಈ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಮನೆ ಹಾನಿಗೆ ನೀಡಲಾದ ಪರಿಹಾರ ದುರುಪಯೋಗವಾದ ಬಗ್ಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಬಾರಿ ದುರುಪಯೋಗ ತಪ್ಪಿಸಲು ಪೂರ್ಣ ಮನೆ ಹಾನಿಗೀಡಾದವರಿಗೆ ರೂ. 1.20 ಲಕ್ಷ ನಗದು ಪರಿಹಾರ ನೀಡಲಾಗುತ್ತಿದ್ದು, ಇದರೊಂದಿಗೆ ಮನೆಯನ್ನು ಸಹ ನಿರ್ಮಿಸಿ ಕೊಡಲಾಗುತ್ತಿದೆ ಎಂದು ಅವರು ಹೇಳಿದರು.
ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಭಾಗಶ: ಹಾನಿಗೀಡಾದ ಮನೆಗಳಿಗೆ 6500 ರೂ. ಪರಿಹಾರವನ್ನು ನೀಡಬೇಕಾಗಿದೆ. ಆದರೆ ರಾಜ್ಯ ಸರ್ಕಾರ 50 ಸಾವಿರ ರೂ. ಪರಿಹಾರ ನೀಡುತ್ತಿದೆ. ಮಳೆಯಿಂದ ಹಾನಿಗೀಡಾದವರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ 43,500 ರೂ. ಹೆಚ್ಚುವರಿಯಾಗಿ ರಾಜ್ಯ ಸರ್ಕಾರ ನೀಡುತ್ತಿದೆ. ಈ ಹಿಂದೆ ಪರಿಹಾರದ ವಿಷಯದಲ್ಲಿ ವಿವಿಧ ಮಾನದಂಡಗಳನ್ನು ಅನುಸರಿಸಲಾಗುತ್ತಿತ್ತು. ಈಗ ಏಕರೂಪದಲ್ಲಿ ಪರಿಹಾರ ನೀಡಲಾಗುತ್ತಿದೆ. ಈಗಾಗಲೇ 17 ಜನರಿಗೆ ಪರಿಹಾರ ಒದಗಿಸಲಾಗಿದ್ದು, ಮನೆ ಹಾನಿಗೀಡಾದ ಎಲ್ಲರಿಗೂ ಆದಷ್ಟು ಬೇಗನೆ ಪರಿಹಾರ ಒದಗಿಸಲಿದ್ದೇವೆ ಎಂದರು.
ಜಿಲ್ಲೆಯಲ್ಲಿ 41706 ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳಿಗೆ ಹಾನಿ, 372 ಹೆಕ್ಟೇರ್ ತೋಟಗಾರಿಕಾ ಬೆಳೆ ಗಳಿಗೆ ಹಾನಿ ಸಂಭವಿಸಿದೆ. ಬೆಳೆ ಹಾನಿ ಬಗ್ಗೆ ಸಮರ್ಪಕವಾಗಿ ಸಮೀಕ್ಷೆ ನಡೆಸಿ ಪರಿಹಾರ ಒದಗಿಸಲು ಸೂಚಿಸಲಾಗಿದೆ. ಮಳೆಯಿಂದಾಗಿ 2962 ವಿದ್ಯುತ್ ಕಂಬಗಳು ಹಾನಿಗೀಡಾಗಿದ್ದು, ಆದಷ್ಟು ಬೇಗನೆ ವಿದ್ಯುತ್ ಕಂಬಗಳು ಮತ್ತು ಪರಿವರ್ತಕಗಳನ್ನು ಸರಿಪಡಿಸಲು ಇಲಾಖೆಗೆ ಸೂಚನೆ ನೀಡಲಾಗಿದೆ.
ಮಳೆಯಿಂದ ಹಾನಿಗೀಡಾಗಿರುವ ರಸ್ತೆಗಳು, ಸೇತುವೆಗಳ ದುರಸ್ತಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಮಳೆಯಿಂದಾಗಿ ಮುಳುಗಡೆಯಾಗುವ ಸಣ್ಣ ಸೇತುವೆಗಳನ್ನು ಎತ್ತರಿಸುವ ಬಗ್ಗೆ ತಾಂತ್ರಿಕ ವರದಿಯನ್ನು ಪಡೆಯಲಾಗುವುದು.
ನೆರೆ ಪರಿಹಾರ ಕಾರ್ಯಗಳಿಗೆ ಅನುದಾನ ಕೊರತೆಯಿರುವುದಿಲ್ಲ. ತುರ್ತು ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿ ಪಿಡಿ ಖಾತೆಯಲ್ಲಿ 48 ಕೋಟಿ ರೂ. ಅನುದಾನ ಲಭ್ಯವಿದ್ದು, ತಹಶೀಲ್ದಾರ್ ಖಾತೆಗಳಲ್ಲೂ ಅನುದಾನ ಲಭ್ಯವಿದೆ. ಅಗತ್ಯ ಬಿದ್ದರೆ ಇನ್ನಷ್ಟು ಪರಿಹಾರವನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ಹೇಳಿದರು.
BREAKING: ಶೀಘ್ರವೇ ಬೆಂಗಳೂರಲ್ಲಿ 2ನೇ ಏರ್ಪೋರ್ಟ್ ನಿರ್ಮಾಣ: ಸಚಿವ ಎಂ.ಬಿ ಪಾಟೀಲ್ | Bengaluru Airport
ಪುರುಷರೇ ಎಚ್ಚರ : `ಶಿಶ್ನ ಕ್ಯಾನ್ಸರ್’ ನ ಆರಂಭಿಕ ರೋಗಲಕ್ಷಣಗಳ ಬಗ್ಗೆ ತಿಳಿಯಿರಿ!
ನನ್ನ ಆಸ್ತಿ ಲೆಕ್ಕ ಕೇಳ್ತಾ ಇದ್ದೀಯಾ? ಎಲ್ಲಾ ಕೊಡ್ತೀನಿ, ಮೊದಲು ನಿನ್ನ ಸಹೋದರನ ಲೆಕ್ಕ ಕೊಡು: HDKಗೆ ಡಿಕೆಶಿ ಪ್ರಶ್ನೆ