ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರ ಹಾಗೂ ವಿಪಕ್ಷಗಳ ನಡೆ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಗಾಂಧಿಭವನದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.
ನಿನ್ನೆ ಉಪಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಕೆಲ ಸಚಿವರೊಂದಿಗೆ ನವದೆಹಲಿಗೆ ತೆರಳಾಗಿತ್ತು. ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಪಕ್ಷದ ವರಿಷ್ಠರಿಗೆ ವಿವರಿಸಲಾಗಿದೆ. ವಿಪಕ್ಷಗಳು ಮುಡಾ ಪ್ರಕರಣಕ್ಕೆ ಪಾದಯಾತ್ರೆ ಮಾಡಿದ್ದು, ಅದನ್ನು ರಾಜಕೀಯವಾಗಿ ಎದುರಿಸುವ ಬಗ್ಗೆ ಚರ್ಚಿಸಲಾಗಿದೆ. ನಮ್ಮ ಸರ್ಕಾರ ರಾಜ್ಯಪಾಲರು ಕೊಟ್ಟಿರುವ ಅನುಮತಿ ಕಾನೂನು ಬಾಹಿರ ಮತ್ತು ಸಂವಿಧಾನ ಬಾಹಿರವಾಗಿದೆ ಎಂದು ತಿಳಿಸಿ, ರಾಜ್ಯಪಾಲರ ನಿರ್ಣಯವನ್ನು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದ್ದು, ವಿಚಾರಣೆ ಆಗಸ್ಟ್ 29 ಕ್ಕೆ ಮುಂದೂಡಿದೆ. ಸಚಿವ ಸಂಪುಟದಲ್ಲಿಯೂ ಅವರ ನಿರ್ಣಯವನ್ನು ಸ್ಪಷ್ಟವಾಗಿ ಖಂಡಿಸಿರುವ ಬಗ್ಗೆಯೂ ವರಿಷ್ಠರಿಗೆ ವಿವರಿಸಲಾಗಿದೆ ಎಂದರು.
ಎಲ್ಲಾ ಸಾಧ್ಯತೆಗಳಿಗೂ ಅವಕಾಶವಿದೆ
ರಾಜ್ಯಪಾಲರ ನಡೆಯ ವಿರುದ್ಧ ಮಾನ್ಯ ರಾಷ್ಟ್ರಪತಿಗಳಿಗೆ ದೂರು ನೀಡುವ ಬಗ್ಗೆ ನವದೆಹಲಿಯಲ್ಲಿ ಚರ್ಚೆಯಾಗಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಈ ಬಗ್ಗೆ ಎಲ್ಲಾ ಸಾಧ್ಯತೆಗಳಿಗೂ ಅವಕಾಶವಿದೆ ಎಂದರು.
ವಾಪಸ್ಸಾಗಿರುವ ಬಿಲ್ ಗಳ ಪರಿಶೀಲನೆ
ಸರ್ಕಾರ ಸಲ್ಲಿಸಿದ ಬಿಲ್ ಗಳನ್ನು ರಾಜ್ಯಪಾಲರು ವಾಪಸ್ಸು ಕಳಿಸಿದ್ಧು, ರಾಜಭವನ ಮತ್ತು ಸರ್ಕಾರದ ನಡುವೆ ಸಂಘರ್ಷ ಪ್ರಾರಂಭವಾಗಿದೆಯೇ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ, ಆರು ಮಸೂದೆಗಳನ್ನು ವಾಪಸ್ಸು ಕಳಿಸಲಾಗಿದ್ದು, ಈ ಬಗ್ಗೆ ಮತ್ತೊಮ್ಮೆ ಸಚಿವಸಂಪುಟದಲ್ಲಿ ಚರ್ಚಿಸಲಾಗುವುದು. ರಾಜ್ಯಪಾಲರಿಗೆ ಸಲ್ಲಿಸಲಾಗಿದ್ದ ಮಸೂದೆಗಳು, ವಿಧಾನಸಭೆ ಹಾಗೂ ವಿಧಾನಪರಿಷತ್ತಿನಲ್ಲಿ ಅಂಗೀಕೃತಗೊಂಡಿದ್ದರಿಂದ , ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.
ಉಕ್ರೇನ್ ಗೆ ನಾಲ್ಕು ‘ಭೀಷ್ಮ್ ಕ್ಯೂಬ್’ ಗಳನ್ನು ಉಡುಗೊರೆಯಾಗಿ ನೀಡಿದ ಭಾರತ | BHISHM Cubes