ನವದೆಹಲಿ : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡಬೇಕು ಎಂದು ಬಿಜೆಪಿ ನಾಯಕರು ಇಂದು ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು. ಇನ್ನು ಇದೇ ವಿಚಾರವಾಗಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರು, ಭ್ರಷ್ಟಾಚಾರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ತಮಗೆ ಬೇಕಾದವರನ್ನು ಲೋಕಾಯುಕ್ತ ಎಡಿಜಿಪಿಯನ್ನಾಗಿ ನೇಪಿಸಿಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರು ಭಯಭೀತರಾಗಿದ್ದಾರೆ. ಭಯದಿಂದಲೇ ಕಾಂಗ್ರೆಸ್ ಪಕ್ಷ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಬಿಜೆಪಿಯಲ್ಲಿ ಭ್ರಷ್ಟಾಚಾರ ಆರೋಪ ಇಲ್ಲದವರಿಗೆ ಸನ್ಮಾನಿಸುತ್ತೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನೀವೇ ದೊಡ್ಡ ಭ್ರಷ್ಟಾಚಾರಿಗಳು ನೀವು ಏನು ಮಾತನಾಡುತ್ತೀರಿ ಅಂತ ಸಿಎಂಗೆ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರೇ 70 ಲಕ್ಷ ರೂಪಾಯಿ ಮೌಲ್ಯದ ವಾಚ್ ಏನಾಯ್ತು? ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಏನಾಯ್ತು? ನೀವೇ ಮಾಡಿದ ರೀಡೂ ವಿಷಯದಲ್ಲಿ ಕೆಂಪಣ್ಣ ವರದಿ ಏನಾಯಿತು? ಈಗ ಸಿಬಿಐ ಅಧಿಕಾರಿಗಳು ತನಿಖೆ ಮಾಡಲು ಬಾರದಂತೆ ಮಾಡಿದ್ದಾರೆ. ಲೋಕಾಯುಕ್ತ ತನಿಖೆ ಮಾಡಬೇಕು ಅಂದರೆ ಸಿಎಂ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದರು.
ಇತ್ತೀಚಿಗೆ ತಮಗೆ ಬೇಕಾದವರನ್ನು ಎಡಿಜಿಪಿಯಾಗಿ ನೇಮಿಸಿಕೊಂಡಿದ್ದಾರೆ. ಭ್ರಷ್ಟಾಚಾರದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಯಾರಿ ಮಾಡಿಕೊಂಡಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಕ್ಯಾಬಿನೆಟ್ ಮೂಲಕ ಗವರ್ನರ್ ಗೆ ಉತ್ತರ ಕೊಡುವ ವಿಚಾರಕ್ಕೆ ಉತ್ತರಿಸಲಿ. ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಉತ್ತರ ಕೊಡಬೇಕು ಎಂದು ನವದೆಹಲಿಯಲ್ಲಿ ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದರು.