ಬಳ್ಳಾರಿ: ಬಳ್ಳಾರಿಯಲ್ಲಿ ಯೋಜನಾಬದ್ಧ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಇಂದು ಉದ್ಘಾಟಿಸಲಾಗಿದೆ. ತಾಯಿ ಮಕ್ಕಳ ಆಸ್ಪತ್ರೆಗೆ ಅಡಿಗಲ್ಲು, ಹಕ್ಕುಪತ್ರ ವಿತರಣೆ ಸುಮಾರು 600 ಕೋಟಿ ರೂ. ಗಿಂತಲೂ ಹೆಚ್ಚು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದೆ. ಮಧ್ಯ ಕರ್ನಾಟಕದಲ್ಲಿ ಬಳ್ಳಾರಿ ಬಹಳ ಪ್ರಾಮುಖ್ಯತೆ ಪಡೆದಿರುವ ಊರು ಮತ್ತು ಜಿಲ್ಲೆ. ಬಳ್ಳಾರಿ ಸಮಗ್ರ ಅಭಿವೃದ್ಧಿಗೆ ವಿಶೇಷ ಅಭಿವೃದ್ದಿ ಯೋಜನೆಯನ್ನು ರೂಪಿಸಲಾಗುವುದು ಎಂದರು.
ಕಾರ್ಖಾನೆ ಸ್ಥಾಪನೆಗೆ ಕ್ರಮ
ಕೆಕೆಆರ್ ಡಿಬಿಯಿಂದ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆ ಆಗಿದ್ದರೂ, ರೈತರಿಗೆ ಪರಿಹಾರ ದೊರೆತಿಲ್ಲ. 10-12 ವರ್ಷಗಳ ಹಿಂದೆ ಪ್ರತಿಷ್ಠಿತ ಸ್ಟೀಲ್ ಮತ್ತು ವಿದ್ಯುತ್ ಕ್ಷೇತ್ರದ ಕಾರ್ಖಾನೆಗಳನ್ನು ಸ್ಥಾಪಿಸಲು ಮುಂದೆ ಬಂದಿದ್ದರೂ, ಅದನ್ನು ಕಾರ್ಯಗತ ಮಾಡಿಲ್ಲ. ಈಗಾಗಲೇ ಅವರಿಗೆ ಈ ಬಗ್ಗೆ ನೋಟೀಸ್ ನೀಡಲಾಗಿದೆ. ಅವರಿಂದ ಸ್ವಾಧೀನವಾಗಿರುವ ಭೂಮಿಯನ್ನು ಮರಳಿಪಡೆದು, ಅದೇ ಉದ್ದೇಶದ ಬೇರೆ ಸಂಸ್ಥೆಗೆ ನೀಡಲಾಗುವುದು ಎಂದರು.
ರಾಷ್ಟ್ರೀಯ ಹೆದ್ದಾರಿ ಹಾಗೂ ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಮಂಜೂರಾತಿ ಪಡೆಯಲಾಗುವುದು
ಎಮನ್ ಇಂಡಿಯಾ ಸಂಸ್ಥೆ ಯೋಜನೆ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆಮೀ ಬಗ್ಗೆ ಸಂಸ್ಥೆಯ ಯೋಜನೆ ಬಗ್ಗೆ ಕೇಂದ್ರ ಸಚಿವರ ಗಮನವನ್ನು ಸೆಳೆಯಲಾಗಿದೆ. ಎಮನ್ ಇಂಡಿಯಾ ಸಂಸ್ಥೆಯೂ ಸಹ ಹಣಕಾಸಿನ ದುಸ್ಥಿತಿಯಲ್ಲಿದ್ದು, ಕಾಮಗಾರಿ ಆಗುತ್ತಿಲ್ಲ. ಆದರೆ ಮರುಟೆಂಡರ್ ಮಾಡಲು ಪ್ರಕ್ರಿಯೆ ಪ್ರಾರಂಭವಾಗಿದೆ. ಫೆಬ್ರವರಿ ಅಂತ್ಯದೊಳಗೆ ಅದು ಮರುಟೆಂಡರ್ ಆಗಲಿದೆ. ನಾಳೆ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿ ಸಚಿವರು ರಾಜ್ಯ ಬೆಂಗಳೂರಿಗೆ ಆಗಮಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಹಾಗೂ ಸುಧಾ ಸರ್ಕಲ್ ನಲ್ಲಿ ರಸ್ತೆ ಓವರ್ ಬ್ರಿಡ್ಜ್ ನಿರ್ಮಾಣದ ಅವಶ್ಯಕತೆ ಇದೆ ಇವೆರಡನ್ನೂ ಪ್ರಸ್ತಾಪ ಮಾಡಿ ಮಂಜೂರಾತಿ ಪಡೆಯಲಾಗುವುದು. ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಕೆಕೆಆರ್ ಡಿ ಬಿ ಯಿಂದ ಮೊದಲನೇ ಹಂತದ 40 ಕೋಟಿ ರೂ.ಗಳನ್ನು ಈಗಾಗಲೇ ನಿಗದಿಪಡಿಸಿ ನೀಡಲಾಗಿದೆ. ಮುಖ್ಯ ಕೆಲಸಗಳನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ನ್ಯಾಯಾಲಯದ ವ್ಯಾಜ್ಯವಿದ್ದು, ಇದನ್ನು ಬಗೆಹರಿಸಿಕೊಂಡು ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
ಭೂ ಮತ್ತು ಜಲ ಆಡಿಟ್
ಕರ್ನಾಟಕದಲ್ಲಿ ಲ್ಯಾಂಡ್ ಬ್ಯಾಂಕ್ ನ ಸಮಸ್ಯೆಗಳಿರುವ ಬಗ್ಗೆ ಉತ್ತರಿಸಿ, , ಭೂಮಿ ಹಂಚಿಕೆ ಮಾಡಿ ಪ್ರಾರಂಭ ಮಾಡದೇ ಇರುವುದು ಭೂಮಿಯನ್ನು ಹಂಚಿಕೆ ಮಾಡಿಯೂ ಪ್ರಾರಂಭಿಸದಿರುವುದು, ಮತ್ತು ಪೂರ್ಣಪ್ರಮಾಣದಲ್ಲಿ ಉಪಯೋಗ ಮಾಡದೇ ಇರುವುದು ನೀತಿಯನ್ನು ಪರಿಶೀಲಿಸುವ ಸಂದರ್ಭದಲ್ಲಿ ಎರಡು ಅಂಶಗಳು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಬಳಕೆಯಾಗದಿರುವ ಭೂಮಿಯು ಎಷ್ಟಿದೆ ಎಂದು ತಿಳಿಯಲು ಭೂಮಿಯ ಆಡಿಟ್ ಮಾಡಲು ಕೈಗಾರಿಕಾ ಇಲಾಖೆಯ ಪ್ರಧಾನಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ. ಉಕ್ಕು ಮತ್ತು ಇಂಧನ ವಲಯದಲ್ಲಿ ನೀರನ್ನು ಹಂಚಿಕೆ ಮಾಡಿ ಬ್ಲಾಕ್ ಮಾಡಿ 15-20 ವರ್ಷಗಳಾಗಿದೆ. ಅವರೂ ಕೂಡ ಉಪಯೋಗ ಮಾಡದೆ, ನೀರಾವರಿಗೂ ಬಿಡುತ್ತಿಲ್ಲ, ಕುಡಿಯುವ ನೀರಿಗೆ ಅವಶ್ಯಕತೆ ಇದೆ. ಜಲ ಆಡಿಟ್ ಮಾಡಿ ಮೊದಲ ಹಂತದ ಆಡಿಟ್ ವರದಿ ಬಂದಿದ್ದು, ಮೊದಲ ಹಂತದ ಹಂಚಿಕೆಯನ್ನು ರದ್ದುಗೊಳಿಸಲು ಈಗಾಗಲೇ ಸೂಚಿಸಲಾಗಿದೆ. ನವೆಂಬರ್ ನಲ್ಲಿ ಆದೇಶ ಹೊರಡಿಸಿದ್ದು, ಜನವರಿ ಅಂತ್ಯದೊಳಗೆ ಸಮಪುರ್ಣ ವರದಿಯನ್ನು ಸಲ್ಲಿಸಲು ಸೂಚಿಸಲಾಗಿದೆ. ಎರಡನೇ ಆಡಿಟ್ ಮಾಡಿ ಸ್ವಾಧೀನ ಪಡಸಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ರಾಜ್ಯದ ಹಿತಾಸಕ್ತಿಯೊಂದಿಗೆ ರಾಜಿ ಇಲ್ಲ
ಸಮಾನಾಂತರ ಜಲಾಶಯಕ್ಕೆ ಕುರಿತಂತೆ ಡಿಪಿಆರ್ ಸಿದ್ದಪಡಿಸಲು 20 ಕೋಟಿ ರೂ.ಗಳು ಮಂಜೂರಾಗಿದ್ದು, ಡಿಪಿಆರ್ ಆದ ನಂತರ ತುಂಗಭದ್ರ ಮಂಡಳಿಯಿಂದ ಅನುಮೋದನೆಯ ಅವಶ್ಯಕತೆ ಇದೆ. ಅಂತರರಾಜ್ಯ ಮಂಡಲಿಯಲ್ಲಿ ಪ್ರತಿ ಬಾರಿ ಅಂತರ ರಾಜ್ಯ ಯೋಜನೆ ರೂಪಿಸಿದಾಗ ಅನಗತ್ಯ ವಿವಾದ ಮಾಡಿಕೊಂಡು 10-20 ವರ್ಷ ಎಳೆದಾಡಬಾರದು ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿಗಳೊಂದಿಗೆ ನಾನೇ ಮಾತನಾಡಿದ್ದೇನೆ. ಅವರು ಒಂದು ತಾಂತ್ರಿಕ ತಂಡವನ್ನು ಕಳಿಸಿಕೊಟ್ಟು, ನಮ್ಮ ತಾಂತ್ರಿಕ ತಂಡ ಅವರೊಂದಿಗೆ ಮಾತನಾಡಿದ್ದಾರೆ. ಆಂಧ್ರ ಮತ್ತು ತೆಲಂಗಾಣ ಮತ್ತು ನಮ್ಮ ನೀರಾವರಿ ಸಚಿವರು ಮಾತನಾಡಿ, ನಾನೂ ಕೂಡ ಈಗಾಗಲೇ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಬಹು ರಾಜ್ಯವಾಗಿರುವುದರಿಂದ ಅವರ ಹಿತಾಸಕ್ತಿಯೇನಿದೆ ಮತ್ತು ನಮ್ಮ ರಾಜ್ಯದ ಹಿತಾಸಕ್ತಿಯನ್ನು ಎಲ್ಲಿಯೂ ರಾಜಿ ಮಾಡಿಕೊಳ್ಳದೇ ಅವರೊಂದಿಗೆ ಚರ್ಚಿಸಿ ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಲು ನಾನು ಮುಂದಾಗಿದ್ದೇನೆ. ಆಂಧ್ರದ ಇಂಜಿನಿಯರ್ ಗಳು ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ. ಅವುಗಳಿಗೆ ಸೂಕ್ತವಾಗಿ ಉತ್ತರಿಸಲಾಗಿದೆ. ಮುಂದೆ ಆಡಳಿತಾತ್ಮಕವಾಗಿ ಹಾಗೂ ಅಂತಿಮವಾಗಿ ತಾಜಕೀಯ ಮಟ್ಟದಲ್ಲಿ ಇದನ್ನು ಬಗೆಹರಿಸಲಾಗುವುದು ಎಂದರು. ಕೆ.ಆರ್.ಎಸ್ ಸೇರಿದಂತೆ ಆಲಮಟ್ಟಿ, ನಾರಾಯಣಪುರ, ಹಿಡಕಲ್ ಜಲಾಶಯಗಳಿಂದ ನೀರನ್ನು ಹಂಚಿಕೆ ಮಾಡಲಾಗಿದೆ. ಎಲ್ಲೆಲ್ಲಿ ಬಳಕೆಯಾಗಿಲ್ಲ ಹಾಗೂ ಬಳಸುವ ಸಾಧ್ಯತೆ ಇಲ್ಲವೋ ಅವುಗಳನ್ನು ಪುನ: ಸ್ವಾಧೀನಕ್ಕೆ ಪಡೆಯಲಾಗುವುದು ಎಂದರು.
ಚರ್ಚೆಗೆ ಅವಕಾಶವಿದೆ
ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ
ವಿಧಾನಸಭೆಯಲ್ಲಿ ಎಲ್ಲಾ ವಿಷಯಗಳನ್ನು ಮಾತನಾಡಲು ಅವಕಾಶವಿದೆ. ಅಲ್ಲಿ ಯಾಕೆ ಚರ್ಚೆ ಮಾಡುವುದು ಇಲ್ಲ. ಹೊರಗಡೆ ಯಾಕೆ ಹೇಳುತ್ತಾರೆ. ಬೆಳಗಾವಿ ಅಧಿವೇಶನದಲ್ಲಿ ಕೇಳಬಹುದಿತ್ತು, ಮುಂದೆ ಬೆಂಗಳೂರಿನ ಅಧಿವೇಶದಲ್ಲಿ ಕೇಳಲಿ ಎಂದರು. ಒಬ್ಬ ವಿರೋಧ ಪಕ್ಷದ ನಾಯಕರು ಎದ್ದು ನಿಂತು ಏನು ಬೇಕಾದರೂ ಕೇಳಬಹುದು ಎಂದರು.