ಬಳ್ಲಾರಿ : ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಿಜಯನಗರ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಜಿಂದಾಲ್ ಸಹಯೋಗದೊಂದಿಗೆ ನಿರ್ಮಿಸಲು ಉದ್ದೇಶಿಸಿರುವ 400 ಹಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ಇಡೀ ಕರ್ನಾಟಕದಲ್ಲಿ 400 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಎಲ್ಲೂ ಇಲ್ಲ. ಇಲಾಖೆಯಿಂದ ನಿರ್ಮಾಣ ಮಾಡುವಾಗ ಸಾಮಾನ್ಯವಾಗಿ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾವಾಗುತ್ತದೆ. ಆದರೆ ಇಂದು ನಾಲ್ಕು ಪಟ್ಟು ಹೆಚ್ಚಾಗಿದೆ. ಜಿಂದಾಲ್ ಸಂಸ್ಥೆ ಕಟ್ಟಿಕೊಡಲು ಒಪ್ಪಿದ್ದು, ಸರ್ಕಾರ ಸಲಕರಣೆಗಳನ್ನು ಒದಗಿಸಲಿದೆ. 400 ಹಾಸಿಗೆಗಳ ಆಸ್ಪತ್ರೆ, ಸಮಗ್ರ ಬಳ್ಳಾರಿ ಜಿಲ್ಲೆಯ ಮಕ್ಕಳಿಗೆ ಹಾಗೂ ತಾಯಂದಿರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸಲಿದೆ ಎನ್ನುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದರು.
ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನ
ನಮ್ಮ ದೇಶದಲ್ಲಿ ಪೌಷ್ಠಿಕತೆ ಮುಖ್ಯವಾದ ಸವಾಲು ಪೌಷ್ಟಿಕತೆಯ ಕೊರತೆಯಿಂದ ಮಕ್ಕಳ ಬೆಳವಣಿಗೆ ಸರಿಯಾಗುವುದಿಲ್ಲ. ಪದೇ ಪದೇ ಕಾಯಿಲೆಗೆ ಒಳಪಡುತ್ತಾರೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು, ಯಾದಗಿರಿ ಮತ್ತು ಬಳ್ಳಾರಿಯಲ್ಲಿ ಪೌಷ್ಟಿಕತೆ ಸುಧಾರಣೆಗೆ ವಿಶೇಷ ಅನುದಾನವನ್ನು ಒದಗಿಸಲಾಗಿದೆ. ನಮ್ಮ ರಾಜ್ಯದ ಬಜೆಟ್ ನಲ್ಲಿ ಪೌಷ್ಟಿಕತೆಗೆ ಅನುದಾನ ಒದಗಿಸಲಾಗಿದೆ. ತೀವ್ರ ಮತ್ತು ಮಧ್ಯಮ ಎಂಬ ಎರಡು ಬಗೆಯ ಅಪೌಷ್ಟಿಕತೆಯಿದೆ. ಹಿಂದಿನ ಸರ್ಕಾರ ಮದ್ಯಮಕ್ಕೆ ಕಡಿಮೆ ಪೌಷ್ಟಿಕ ಆಹಾರ ತೀವ್ರಕ್ಕೆ ಮಾತ್ರ ಪೌಷ್ಟಿಕಾಂಶವುಳ್ಳ ಆಹಾರ ಕೊಡುತ್ತಿದ್ದರು. ನಮ್ಮ ಸರ್ಕಾರ ಅದನ್ನು ಬದಲಾವಣೆ ಮಾಡಿ ತೀವ್ರ ಪೌಷ್ಟಿಕಾಂಶದ ಕೊರತೆಯಿರುವವರಿಗೆ ನೀಡುವ ಆಹಾರವನ್ನೇ ಎಲ್ಲರಿಗೂ ನೀಡಬೇಕೆಂಬ ಪ್ರಮುಖ ತೀರ್ಮಾನ ಮಾಡಿದ್ದೇವೆ. ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಕಲ್ಯಾಣ ಕರ್ನಾಟಕಕ್ಕೆ 24 ಪಿಹೆಚ್ ಸಿ ಕೇಂದ್ರವನ್ನು ಸಿ ಹೆಚ್ ಸಿ ಕೇಂದ್ರವಾಗಿ ಮೇಲ್ದರ್ಜೇಗೇರಿಸಲಾಗುತ್ತಿದೆ. ಹಾಗು ಹೊಸ ಪಿಹೆಚ್ ಸಿ ಗಳನ್ನು ನಿರ್ಮಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆ ಬಂದಿರುವುದು ನಮ್ಮೆಲ್ಲ ಪ್ರಯತ್ನಕ್ಕೆ ಜಿಂದಾಲ್ ಕಂಪನಿ ಶಕ್ತಿ ಹಾಗೂ ಬೆಂಬಲ ನೀಡಿದೆ. ಜಿಂದಾಲ್ ಸಂಸ್ಥೆಗೆ ಶಕ್ತಿ ಇದೆ. ಇನ್ನಷ್ಟು ಸಿಎಸ್ ಆರ್ ನಿಧಿಯನ್ನು ಬಳ್ಳಾರಿ, ಹೊಸಪೇಟೆ, ಎರಡೂ ಜಿಲ್ಲೆಯ ಎಲ್ಲಾ ತಾಲ್ಲೂಕಿಗೆ ಆರೋಗ್ಯ, ಶಿಕ್ಷಣ, ಮೂಲಭೂತ ಸೌಕರ್ಯಗಳಲ್ಲಿ ಜಿಂದಾಲ್ ಕೊಡುಗೆಯನ್ನು ನಿರೀಕ್ಷಿಸುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸಚಿವ ಬಿ.ಶ್ರೀರಾಮುಲು, ಶಾಸಕ ಬಿ ನಾಗೇಂದ್ರ, ಸೋಮಶೇಖರರೆಡ್ಡಿ ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.