ಚಿತ್ರದುರ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನವೆಂಬರ್ 22 ಮತ್ತು 23ರಂದು ಎರಡು ದಿನಗಳ ಕಾಲ ಚಿತ್ರದುರ್ಗ ಜಿಲ್ಲಾ ಪ್ರವಾಸ ಮಾಡಲಿದ್ದಾರೆ.
ಮುಖ್ಯಮಂತ್ರಿಗಳು ನವೆಂಬರ್ 22ರಂದು ಬೆಳಗ್ಗೆ 10ಕ್ಕೆ ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು ಬೆಳಿಗ್ಗೆ 10.45ಕ್ಕೆ ಹಿರಿಯೂರು ತಾಲೂಕಿನ ವಿ.ವಿ.ಪುರ ಮುರಾರ್ಜಿ ದೇಸಾಯಿ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ.
ಬಳಿಕ ಹಿರಿಯೂರು ತಾಲೂಕಿನ ಐತಿಹಾಸಿಕ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ ಮಾಡಿ, ನಂತರ ವಾಣಿ ವಿಲಾಸ ಸಾಗರ ಹತ್ತಿರ ಆಯೋಜಿಸಿರುವ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ನವೆಂಬರ್ 22 ಮಧ್ಯಾಹ್ನ 1.45ಕ್ಕೆ ಹಿರಿಯೂರು ತಾಲೂಕು ವಿವಿ ಪುರ ಮುರಾರ್ಜಿ ದೇಸಾಯಿ ಮಾಡಲ್ ರೆಸಿಡೆನ್ಸಿಯಲ್ ಸ್ಕೂಲ್ ಆವರಣದ ಹೆಲಿಪ್ಯಾಡ್ನಿಂದ ಚಳ್ಳಕೆರೆ ಸಾಯಿ ಬಾಬಾ ಮಂದಿರ ಹತ್ತಿರದ ಹೆಲಿಪ್ಯಾಡ್ಗೆ ತೆರಳಲಿದ್ದಾರೆ. ಮೀರಾಸಾಬಿಹಳ್ಳಿ ರಾಣಿಕೆರೆಗೆ ಬಾಗಿನ ಅರ್ಪಣೆ ಮಾಡಲಿದ್ದಾರೆ.
ನಂತರ ಚಳ್ಳಕೆರೆಯ ಬಿ.ಎಂ.ಜಿ.ಹೆಚ್.ಎಸ್. ರಂಗಮಂದಿರದ ಆವರಣದಲ್ಲಿ ಆಯೋಜಿಸಿರುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ 4ಗಂಟೆಗೆ ಚಳ್ಳಕೆರೆಯ ಸಾಯಿ ಬಾಬಾ ಮಂದಿರ ಹತ್ತಿರದ ಹೆಲಿಪ್ಯಾಡ್ನಿಂದ ಮತ್ತೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ನವೆಂಬರ್ 23ರಂದು ಬೆಳಿಗ್ಗೆ 9ಕ್ಕೆ ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಹೊರಟು ಬೆಳಗ್ಗೆ 10ಕ್ಕೆ ಚಿತ್ರದುರ್ಗ ಮುರುಘಾ ಮಠ ಆವರಣದ ಹೆಲಿಪ್ಯಾಡ್ಗೆ ಆಗಮಿಸಲಿದ್ದಾರೆ.
ಬಳಿಕ ಚಿತ್ರದುರ್ಗ ನಗರ ಆಕಾಶವಾಣಿ ಸಮೀಪದ ಸರಸ್ವತಿ ಕಾನೂನು ಕಾಲೇಜಿನ ನೂತನ ಕಟ್ಟಡ ‘ಕಾನೂನು ಸೌಧ’ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11ಕ್ಕೆ ಮುರುಘಾ ಮಠದ ಆವರಣದ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಕ್ರೀಡಾಂಗಣ ಹೆಲಿಪ್ಯಾಡ್ಗೆ ತೆರಳಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಪಿ.ಚನ್ನಬಸವೇಶ ತಿಳಿಸಿದ್ದಾರೆ.