ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮರಕ್ಕೆ ಬೊಲೆರೊ ವಾಹನ ಡಿಕ್ಕಿಯಾಗಿ 6 ಜನ ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.
ಘಟನೆಗೆ ಸಿಎಂ ಬೊಮ್ಮಾಯಿ ಕಳವಳ ವ್ಯಕ್ತಪಡಿಸಿದ್ದು, ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹಾಗೂ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಮರಕ್ಕೆ ಬೊಲೆರೊ ವಾಹನ ಡಿಕ್ಕಿಯಾಗಿ 6 ಮಂದಿ ಮೃತಪಟ್ಟ ಘಟನೆ ರಾಮದುರ್ಗ ತಾಲೂಕಿನ ಚುಂಚನೂರ ಬಳಿ ನಡೆದಿದೆ. ನಿಯಂತ್ರಣ ತಪ್ಪಿ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.
ಮೃತರನ್ನು ಹನುಮವ್ವ, ದೀಪಾ, ಸವಿತಾ, ಸುಪ್ರಿತಾ, ಮಾರುತಿ, ಇಂದಿರವ್ವ ಎಂದು ಗುರುತಿಸಲಾಗಿದೆ. ಸವದತ್ತಿ ಯಲ್ಲಮನ ದರ್ಶನಕ್ಕೆ ಹೊರಟಾಗ ಈ ದುರ್ಘಟನೆ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಎಸ್ ಪಿ ಡಾ ಸಂಜೀವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಭೀಕರ ಅಪಘಾತಕ್ಕೆ ಜನರು ಬೆಚ್ಚಿ ಬಿದ್ದಿದ್ದಾರೆ.