ಮೈಸೂರು: ಕುಮಾರಸ್ವಾಮಿ ಬಹಳ ಕ್ಲೀನ್ ಸ್ವಾಮಿಯಂತೆ. ನನಗೆ ಅವರ ವಿಚಾರ ಗೊತ್ತಿರಲಿಲ್ಲ. ಅವರ ವಿರುದ್ಧ ಸುಮಾರು 50 ಡಿನೋಟಿಫಿಕೇಶನ್ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವನ್ನು ಹೊರಗೆ ತರುತ್ತೇನೆ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ ವಿಚಾರಣೆ ನಡೆಸಲು ಲೋಕಾಯುಕ್ತದವರು ರಾಜ್ಯಪಾಲರಿಗೂ ಪತ್ರ ಬರೆದಿದ್ದಾರಂತೆ. ಆದರೆ ಕುಮಾರಸ್ವಾಮಿ ಯೂಟರ್ನ್ ಮಾಡಿಕೊಂಡು ಈಗ ಬಿಜೆಪಿ ಮೊರೆ ಹೋಗಿದ್ದಾರೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ವಾಗ್ಧಾಳಿಯನ್ನು ನಡೆಸಿದ್ದಾರೆ.
ಮೈಸೂರಿನ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದಂತ ಅವರು, ವಿಜಯೇಂದ್ರ ನಿಮ್ಮ ತಂದೆ ಎರಡು ಸಾರಿ ರಾಜೀನಾಮೆ ಕೊಟ್ಟಿದ್ದೇಕೆ? ಎಂದು ಲೆಕ್ಕ ಕೊಡು. ನಾಳೆ ನೀನು ಮೈಸೂರಿಗೆ ಬಂದು ಸಭೆ ಮಾಡುವಾಗ ಲಕ್ಷ್ಮಿ ವಿಲಾಸ್ ಬ್ಯಾಂಕ್ ನಿಂದ ವಿದೇಶಕ್ಕೆ ಆರ್ಟಿಜಿಎಸ್ ಮಾಡಿದ್ದೀಯಲ್ಲಾ, ಅದು ಯಾಕೆ? ನಿಮ್ಮ ತಂದೆ ಕಣ್ಣೀರು ಹಾಕಿದ್ದು ಏಕೆ? ಎಂದು ವಿವರಿಸು. ಇಲ್ಲಿ ಯಾರು ರಾಜೀನಾಮೆ ನೀಡಬೇಕು ಎಂದು ಕಾಲ ತೀರ್ಮಾನ ಮಾಡುತ್ತದೆ.
ನಾನು ಮಂಡ್ಯದಲ್ಲಿ ನಮ್ಮ ನಾಯಕರ ಮಾತನ್ನು ನಂಬಬೇಡಿ, ಕೇವಲ ಯಡಿಯೂರಪ್ಪ, ಕುಮಾರಸ್ವಾಮಿ, ವಿಜಯೇಂದ್ರ, ಅಸ್ವತ್ಥ್ ನಾರಾಯಣ, ಯೋಗೇಶ್ವರ್, ಯತ್ನಾಳ್ ಅವರ ಮಾತಿನ ಮೇಲೆ ನಂಬಿಕೆ ಇಡಿ ಎಂದು ಹೇಳಿದ್ದೆ. ಈಗ ನೀವೇ ಅವರ ನುಡಿಮುತ್ತುಗಳನ್ನು ನೀವೇ ಕೇಳಿ ಎಂದು ಮೈತ್ರಿ ನಾಯಕರ ಹಳೇ ಹೇಳಿಕೆಗಳ ವಿಡಿಯೋಗಳನ್ನು ಪ್ರಸಾರ ಮಾಡಿಸಿದರು.
ಕುಮಾರಸ್ವಾಮಿ ಅವರು ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣದಲ್ಲಿ ಮೊದಲು ನನ್ನ ಮೇಲೆ ಆರೋಪ ಮಾಡಿದರು. ನಂತರ ಪ್ರೀತಂ ಗೌಡನ ಮೇಲೆ ಆರೋಪ ಮಾಡಿದ್ದಾರೆ. ಈ ಹಿಂದೆ ಯಡಿಯೂರಪ್ಪನವರಿಗೆ ಅಧಿಕಾರ ನೀಡದೇ ಬೆನ್ನಿಗೆ ಚೂರಿ ಹಾಕಿದವರು ಯಾರು? ಕುಮಾರಸ್ವಾಮಿಯೇ ಹೊರತು ಕಾಂಗ್ರೆಸಿಗರಲ್ಲ.
ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದಲ್ಲಿ ಯಾರನ್ನೂ ಬೆಳೆಯಲು ಬಿಡಲಿಲ್ಲ. ಡಿಸಿಎಂ ಆಗಿದ್ದ ಸಿದ್ದರಾಮಯ್ಯ ಅವರನ್ನು ಬಿಡಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಪಕ್ಷದಲ್ಲಿ 17 ಸಂಸದರಿದ್ದರು. ಅವರಲ್ಲಿ ಯಾರೊಬ್ಬರೂ ಈಗ ಜೆಡಿಎಸ್ ಪಕ್ಷದಲ್ಲಿ ಇಲ್ಲ. ತಮ್ಮ ಮಕ್ಕಳಿಗೆ ರಾಜಕೀಯ ದಾರಿ ಮಾಡಿಕೊಡಲು ಕುಮಾರಸ್ವಾಮಿ ಅವರು ಜೆಡಿಎಸ್ ನಾಯಕರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಇದು ಜನತಾದಳದ ಇತಿಹಾಸ. ಕೊನೆಗೆ ತನ್ನ ಮಗನಿಗೆ ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ ಎಂದು ಅಣ್ಣನ ಮಗನ ವಿರುದ್ಧವೇ ಪಿತೂರಿ ಮಾಡಿ ಅವನ ಮೇಲೂ ಕೇಸ್ ದಾಖಲಾಗುವಂತೆ ಮಾಡಿದ್ದಾರೆ. ಅಂತಹವರು ಸಿದ್ದರಾಮಯ್ಯ ಹಾಗೂ ನನ್ನನ್ನು ಬಿಡುತ್ತಾರಾ?
ಚಲುವರಾಯಸ್ವಾಮಿ, ಬಿ.ಎಲ್ ಶಂಕರ್ ಸೇರಿದಂತೆ ಅನೇಕರು ಜೆಡಿಎಸ್ ಪಕ್ಷದಲ್ಲಿದ್ದವರು. ಈಗ ಆ ಪಕ್ಷ ತೊರೆದಿದ್ದಾರೆ. ಹೀಗೆ ಎಲ್ಲರನ್ನು ಮುಗಿಸಿಕೊಂಡು ಅವರು ಅಧಿಕಾರಕ್ಕೆ ಬಂದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಎರಡನೇ ಬಾರಿಗೆ ಹಿಂದುಳಿದ ವರ್ಗದ ನಾಯಕ ಮುಖ್ಯಮಂತ್ರಿಯಾಗಿರುವುದನ್ನು ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅವರ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಇದು ಅವರಿಂದ ಸಾಧ್ಯವಿಲ್ಲ.