ಮೈಸೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಪುತ್ರ ಎಂಎಲ್ಸಿ ಯತೀಂದ್ರ ಅವರು ಹೇಳಿಕೆ ನೀಡಿದ್ದು, ನ್ಯಾಯ ಸತ್ಯ ನಮ್ಮ ಪರವಾಗಿ ಇದೆ ಎಂದು ಮೊದಲಿನಿಂದಲೂ ಹೇಳುತ್ತಿದ್ದೆವು. ಹಾಗಾಗಿ ಈಗ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಅವರು ತಿಳಿಸಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಕುಟುಂಬಸ್ಥರು ಯಾರು ಕಾನೂನುಬಾಹಿರವಾಗಿ ಕೆಲಸ ಮಾಡಿಲ್ಲ. ಮುಡಾ ಸೈಟ್ ಪಡೆದ ವಿಚಾರವಾಗಿ ಕಾನೂನುಬಾಹಿರ ಕೆಲಸ ಮಾಡಿಲ್ಲ. ಮುಡಾದವರು ಅನಧಿಕೃತವಾಗಿ ನಮ್ಮ ಜಮೀನು ವಶಪಡಿಸಿಕೊಂಡಿದ್ದರು. ಅನಧಿಕೃತವಾಗಿ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ಕೊಡಬೇಕಿತ್ತು. ಬೇರೆಯವರಿಗೆ ಪರಿಹಾರ ಕೊಟ್ಟಂತೆ ಅದೇ ರೀತಿ ನಮಗೂ ಕೊಟ್ಟಿದ್ದಾರೆ.
ಇದನ್ನು ದೊಡ್ಡ ಹಗರಣ ಅಂತ ಬಿಂಬಿಸಿ ವರ್ಚಸ್ಸು ಕುಗ್ಗಿಸಲು ಯತ್ನಿಸಲಾಯಿತು. ಸಿಎಂ ಸಿದ್ದರಾಮಯ್ಯನವರು ವರ್ಚಸ್ಸು ಕೂಗ್ಗಿಸಲು ಪ್ರಯತ್ನ ಮಾಡಿದರು. ಲೋಕಾಯುಕ್ತ ತನಿಖೆ ಮಾಡಿ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದೆ. ಕೋರ್ಟ್ ಕೂಡ ಇದನ್ನು ಒಪ್ಪಿಕೊಂಡಿದೆ. ಲೋಕಾಯುಕ್ತ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ತನಿಖೆ ಮಾಡಿದ್ದಾರೆ. ಇಡಿ ಏನೇ ತನಿಖೆ ಮಾಡಿದರು ಕೊನೆಗೆ ಇದೇ ತೀರ್ಪು ಬರುತ್ತದೆ ಎಂದು ತಿಳಿಸಿದರು.