ನವದೆಹಲಿ: ವಿಮಾನ ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಮಹತ್ವದ ಘೋಷಣೆ ಮಾಡಿದೆ. ದೇಶೀಯ ವಿಮಾನ ಟಿಕೆಟ್ ದರಗಳ ಮೇಲಿದ್ದ ‘ತಾತ್ಕಾಲಿಕ ಮಿತಿಗಳನ್ನು’ (Temporary Fare Caps) ಇಂದಿನಿಂದ (ಮಾರ್ಚ್ 23) ಜಾರಿಗೆ ಬರುವಂತೆ ಸಂಪೂರ್ಣವಾಗಿ ಹಿಂಪಡೆಯಲಾಗಿದೆ ಎಂದು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ಕಳೆದ ವರ್ಷದ ಡಿಸೆಂಬರ್ನಲ್ಲಿ ‘ಇಂಡಿಗೋ’ (IndiGo) ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿ ಟಿಕೆಟ್ ದರಗಳು ಗಗನಕ್ಕೇರಿದ್ದವು. ಇದನ್ನು ನಿಯಂತ್ರಿಸಲು ಸರ್ಕಾರ ದರಗಳ ಮೇಲೆ ಗರಿಷ್ಠ ಮತ್ತು ಕನಿಷ್ಠ ಮಿತಿ ಹೇರಿತ್ತು. ಇದೀಗ ವಲಯದಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವ ಹಿನ್ನೆಲೆಯಲ್ಲಿ ಈ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ.
ಇಂದಿನಿಂದ ವಿಮಾನಯಾನ ಸಂಸ್ಥೆಗಳು ಮಾರುಕಟ್ಟೆಯ ಬೇಡಿಕೆ ಮತ್ತು ಪೂರೈಕೆಗೆ (Demand and Supply) ಅನುಗುಣವಾಗಿ ತಾವೇ ಟಿಕೆಟ್ ದರಗಳನ್ನು ನಿಗದಿಪಡಿಸುವ ಸ್ವಾತಂತ್ರ್ಯವನ್ನು ಮರಳಿ ಪಡೆದಿವೆ.2025ರ ಡಿಸೆಂಬರ್ 6ರಂದು ವಿಮಾನಗಳ ರದ್ದತಿಯಿಂದಾಗಿ ಟಿಕೆಟ್ ದರಗಳಲ್ಲಿ ಅಸಹಜ ಏರಿಕೆಯಾಗಿತ್ತು. ಪ್ರಯಾಣಿಕರ ಹಿತದೃಷ್ಟಿಯಿಂದ ಮತ್ತು ತುರ್ತು ಪರಿಸ್ಥಿತಿಯಲ್ಲಿ ಟಿಕೆಟ್ ದರಗಳು ಕೈಗೆಟಕುವಂತೆ ಮಾಡಲು ಸರ್ಕಾರ ಈ ಬೆಲೆ ನಿಯಂತ್ರಣವನ್ನು ಜಾರಿಗೆ ತಂದಿತ್ತು.
ದರ ನಿಗದಿಯ ಸ್ವಾತಂತ್ರ್ಯ ನೀಡಿದರೂ ಸಚಿವಾಲಯವು ವಿಮಾನಯಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. “ಅಸಮಂಜಸವಾಗಿ ಅಥವಾ ವಿಪರೀತವಾಗಿ ಟಿಕೆಟ್ ದರ ಏರಿಸಿದರೆ (Surge pricing) ಕಠಿಣ ಕ್ರಮ ಜರುಗಿಸಲಾಗುವುದು. ದರಗಳು ಪಾರದರ್ಶಕವಾಗಿರಬೇಕು ಮತ್ತು ಪ್ರಯಾಣಿಕರಿಗೆ ಹೊರೆಯಾಗಬಾರದು” ಎಂದು ಸೂಚಿಸಲಾಗಿದೆ.
ಟಿಕೆಟ್ ದರಗಳ ಏರಿಳಿತದ ಮೇಲೆ ಸಚಿವಾಲಯವು ರಿಯಲ್-ಟೈಮ್ (Real-time) ನಿಗಾ ವಹಿಸಲಿದೆ. ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾದರೆ ಯಾವುದೇ ಕ್ಷಣದಲ್ಲಿ ಮರಳಿ ನಿಯಂತ್ರಣ ಹೇರುವ ಅಧಿಕಾರವನ್ನು ಸರ್ಕಾರ ತನ್ನ ಬಳಿಯೇ ಉಳಿಸಿಕೊಂಡಿದೆ.








