ಬೆಂಗಳೂರು : ರಾಜ್ಯದಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ‘ಸಿಟಿ ಆಕ್ಸಿಲರೇಟರ್’ ಕಾರ್ಯಕ್ರಮಕ್ಕೆ ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತ ಶುಕ್ರವಾರ ಚಾಲನೆ ನೀಡಿದರು.
ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆಯಡಿ ಮೇಲ್ಛಾವಣಿ ಸೌರ (ಆರ್‌ಟಿಎಸ್) ಘಟಕಗಳ ಅಳವಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ(ಎಂಎನ್‌ಆರ್‌ಇ), ಶಕ್ತಿ ಸಸ್ಟೇನಬಲ್ ಎನರ್ಜಿ ಫೌಂಡೇಶನ್, ನಾಲೆಡ್ಜ್ ಪಾರ್ಟನರ್ ಕೆಪಿಎಂಜಿ ಮತ್ತು ಬೆಸ್ಕಾಂ ಸಹಯೋಗದೊಂದಿಗೆ ಇಂದು ಸಿಟಿ ಆಕ್ಸಿಲರೇಟರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯ ‘ಸಿಟಿ ಆಕ್ಸಿಲರೇಟರ್’ ಉಪಕ್ರಮದಡಿ ಮೊದಲ ಹಂತದಲ್ಲಿ ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ-ಧಾರವಾಡ ನಗರಗಳಲ್ಲಿ ಸೌರ ಮೇಲ್ಛಾವಣಿ ಘಟಕಗಳ ಸ್ಥಾಪನೆಗೆ ಉತ್ತೇಜನೆ ನೀಡಲಾಗುತ್ತದೆ.
ಸಿಟಿ ಆಕ್ಸಿಲರೇಟರ್ ಕಾರ್ಯಕ್ರಮದಡಿ ವಿದ್ಯುತ್ ವಿತರಣಾ ಕಂಪನಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ನೆರವು ಒದಗಿಸಲಾಗುತ್ತದೆ. ಈ ಉಪಕ್ರಮವನ್ನು ದೇಶಾದ್ಯಂತ 100 ನಗರಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುವುದು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, “ಪಿಎಂ-ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯು ನವೀಕರಿಸಬಹುದಾದ ಇಂಧನ ಬಳಕೆಗೆ ಒತ್ತು ನೀಡುವ ಸರ್ಕಾರದ ಉಪಕ್ರಮವಾಗಿದೆ. ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರ ಮಾರ್ಗದರ್ಶನದಲ್ಲಿ ರಾಜ್ಯಾದ್ಯಂತ ಮನೆಗಳಲ್ಲಿ ಸೌರಶಕ್ತಿಯ ಬಳಕೆಯನ್ನು ಉತ್ತೇಜಿಸುವ ಗುರಿ ಹೊಂದಿದ್ದು, ಇದರಿಂದ ಕರ್ನಾಟಕ ನವೀಕರಿಸಬಹುದಾದ ಇಂಧನ ನೀತಿಯ ಗುರಿ ತಲುಪಲು ಸುಲಭವಾಗಲಿದೆ,”ಎಂದರು.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್. ಶಿವಶಂಕರ್ ಮಾತನಾಡಿ, “ಸುಸ್ಥಿರ ವಿದ್ಯುತ್ ಉತ್ಪಾದನೆ ಹಾಗೂ ಬಳಕೆಗೆ ರೂಪಿಸಿರುವ ಪಿಎಂ ಸೂರ್ಯಘರ್ ಯೋಜನೆಯನ್ನು ಅಳವಡಿಸಿಕೊಳ್ಳುವುದರಿಂದ ಸಾಂಪ್ರದಾಯಿಕ ಇಂಧನ ಮೂಲಗಳ ಮೇಲಿನ ಅವಲಂಬನೆ ತಗ್ಗುವುದು. ಪರಿಸರ ಸ್ನೇಹಿಯೂ ಆದ ಸೌರ ವಿದ್ಯುತ್ತಿನ ಬಳಕೆಯಿಂದ ಹಣದ ಉಳಿತಾಯವೂ ಸಾಧ್ಯವಾಗಲಿದೆ. ರಾಜ್ಯದಲ್ಲಿ ಯೋಜನೆಯ ಯಶಸ್ವಿ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿರುವ ಬೆಸ್ಕಾಂ ಒತ್ತು ನೀಡುತ್ತಿದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಪಿ.ರುದ್ರಪ್ಪಯ್ಯ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಆರ್. ಜಯಕುಮಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಗ್ರಿಡ್ ಸಂಪರ್ಕದ ಲಾಭವೇನು?
ದೇಶದ ಒಂದು ಕೋಟಿ ಮನೆಗಳ ಮಲ್ಛಾವಣಿಗೆ ಸೋಲಾರ್ ಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಒದಗಿಸುವ ಸೂರ್ಯ ಘರ್ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕೇಂದ್ರ ಸರಕಾರದ pmsuryaghar.gov.in ವೆಬ್‌ಸೈಟ್‌ನಲ್ಲಿ ರೂಫ್ ಟಾಪ್ ಸೋಲಾರ್ ವ್ಯವಸ್ಥೆಗೆ ಗೃಹ ಬಳಕೆದಾರರು ಅರ್ಜಿ ಸಲ್ಲಿಸಬಹುದು.
⦁ ಮನೆಯ ರೂಫ್ ಟಾಪ್ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜತೆಗೆ ಸಂಪರ್ಕಿಸುವುದರಿಂದ 25 ವರ್ಷಗಳ ಕಾಲ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ.
⦁ ಮನೆಗಳ ಮೇಲ್ಛಾವಣೆಯಲ್ಲಿ ಅಳವಡಿಸುವುದರಿಂದ ಹೆಚ್ಚುವರಿ ಜಾಗದ ಅಗತ್ಯ ಇಲ್ಲ.
⦁ ನಿರ್ವಹಣೆ ವೆಚ್ಚ ತೀರಾ ಕಡಿಮೆ.
ಸಬ್ಸಿಡಿ:
1 ಕಿ.ಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 30,000 ರೂ. ಸಬ್ಸಿಡಿ ದೊರೆಯುತ್ತಿದ್ದು, 2 ಕಿಲೋ ವ್ಯಾಟ್ ಸಾಮರ್ಥ್ಯದ ವ್ಯವಸ್ಥೆಗೆ 60,000 ರೂ. ಸಬ್ಸಿಡಿ ನಿಗದಿಪಡಿಸಲಾಗಿದೆ. 3 ಕಿಲೋ ವ್ಯಾಟ್ ಮೇಲ್ಪಟ್ಟ ವ್ಯವಸ್ಥೆಗೆ ಗರಿಷ್ಠ ಸಬ್ಸಿಡಿ ಮಿತಿ 78,000 ರೂ. ದೊರೆಯಲಿದೆ.
BREAKING: ರಾಜ್ಯದಲ್ಲಿ ಮನೆ ಮನೆ ಜಾತಿಗಣತಿ ಸಮೀಕ್ಷೆ ಮುಕ್ತಾಯ: ಹೀಗಿದೆ ಸರ್ವೆ ಅಂಕಿ-ಅಂಶದ ವಿವರ
‘ಗ್ರಾಮ ಪಂಚಾಯ್ತಿ ಚುನಾವಣೆ’ಗೆ ‘ನಾಮಪತ್ರ’ದೊಂದಿಗೆ ಸಲ್ಲಿಸಲು ಈ ‘ದಾಖಲೆ’ಗಳು ಕಡ್ಡಾಯ
 
		



 




