ಬೆಂಗಳೂರು: ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಹ ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಹೆಣ್ಣು ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿ ತಂಡ ಬಹುತೇಕ ಪೂರ್ಣ ಗೊಳಿಸಿದೆ. ವಾರದಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಪ್ರಕರಣದಲ್ಲಿ ಹನ್ನೆರಡು ಆರೋಪಿಗಳನ್ನು ಬಂಧಿಸಲಾಗಿದ್ದು, ಎರಡು ತಿಂಗಳಿಂದ ತನಿಖೆ ನಡೆಸುತ್ತಿದ್ದರೂ ಸಿಐಡಿಗೆ ಸ್ಕ್ಯಾನಿಂಗ್ ಯಂತ್ರಗಳ ಮೂಲ ಮಾತ್ರ ಪತ್ತೆಯಾಗಿಲ್ಲ. ಈ ಮಧ್ಯೆ ಆರೋಗ್ಯ ಇಲಾಖೆಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಸ್ಕ್ಯಾನಿಂಗ್ ಯಂತ್ರಗಳ ಅಕ್ರಮ ಮಾರಾಟ ಹಾಗೂ ಬಳಕೆ ಇದೆಯಾದರೂ ಭ್ರೂಣ ಪತ್ತೆಗೆ ಬಳಸುತ್ತಿದ್ದ ಯಂತ್ರಗಳನ್ನು ತಂದಿದ್ದು ಎಲ್ಲಿ ಎನ್ನುವುದು ನಿಗೂಢವಾಗಿದೆ ಎಂದು ತಿಳಿದುಬಂದಿದೆ.
ಈ ಒಂದು ಭ್ರೂಣಲಿಂಗ ಹತ್ಯೆ ಹಾಗೂ ಪತ್ತೆ ಪ್ರಕರಣದಲ್ಲಿ ಶಿವಲಿಂಗೇಗೌಡ, ನಯನ್‌ಕುಮಾರ್, ವೀರೇಶ್, ನವೀನ್‌ಕುಮಾರ್, ಡಾ.ತುಳಸಿರಾಮ್, ರಿಜ್ಞಾ ಖಾನಂ, ಮೀನಾ, ಡಾ.ಚಂದನ್ ಬಲ್ಲಾಳು ಮತ್ತು ನಿಸಾರ್ ಸೇರಿದಂತೆ 12 ಆರೋಪಿಗಳನ್ನ ಪೊಲೀಸರು ಬಂಧಿಸಿದ್ದರು.
ಪ್ರಕರಣದ ಹಿನ್ನೆಲೆ?
ಗರ್ಭಿಣಿಯರನ್ನು ಗುರುತಿಸಿ ಮಂಡ್ಯದ ಆಲೆಮನೆಯಲ್ಲಿ ಹೆಣ್ಣು ಭ್ರೂಣ ಖಚಿತವಾದರೆ ಮೈಸೂರಿನ ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಗೆ ಕರೆದೊಯ್ದು ಗರ್ಭಪಾತ ಮಾಡಿಸುತ್ತಿದ್ದರು. ಈ ಮಾಹಿತಿ ಕೆಲವರಿಗೆ ಗೊತ್ತಾದ ಹಿನ್ನಲೆ ಮೈಸೂರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಮತ್ತೊಂದು ಆಸ್ಪತ್ರೆ ಆರಂಭಿಸಿ, ಅಲ್ಲಿ ಗರ್ಭಪಾತ ಮಾಡಿಸುತ್ತಿದ್ದರು.
3 ವರ್ಷಗಳಿಂದ ಪ್ರತಿ ತಿಂಗಳು ಕನಿಷ್ಠ 20 ರಿಂದ 25 ಭ್ರೂಣ ಹತ್ಯೆ ಮಾಡುತ್ತಿದ್ದರು. ಈ ಅವಧಿಯಲ್ಲಿ ಸುಮಾರು 900ಕ್ಕೂ ಭ್ರೂಣ ಹತ್ಯೆ ಮಾಡಿರುವುದು ಪತ್ತೆಯಾಗಿತ್ತು. ಈ ದಂಧೆ ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಮೈಸೂರು, ತುಮಕೂರು, ದಾವಣಗೆರೆಗೂ ವ್ಯಾಪಿಸಿರುವುದು ಬೆಳಕಿಗೆ ಬಂದಿತ್ತು. ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿ ವಹಿಸಿತ್ತು.ಇದೀಗ ವರದಿಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲು ಸಿಐಡಿ ತಂಡ ಸಿದ್ಧತೆ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ.