ಬೆಂಗಳೂರು : ನಾಳೆಯಿಂದ ರಾಜ್ಯಾದ್ಯಂತ ಜಾತಿ ಗಣತಿ ಆರಂಭವಗಲಿದ್ದು, ಜಾತಿ ಸಮೀಕ್ಷೆಯಲ್ಲಿ ಕ್ರಿಶ್ಚಿಯನ್ ಅಡಿ ವಿವಿಧ ಜಾತಿಗಳನ್ನು ಉಲ್ಲೇಖಿಸಲಾಗುವುದೇ ಎಂಬುದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದರ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಲಾಗಿದ್ದು, ಅನಗತ್ಯವಿರುವ ಅಂಶಗಳನ್ನು ತೆಗೆದುಹಾಕಲು ಹಿಂದುಳಿದ ವರ್ಗಗಳ ಆಯೋಗವೇ ನಿರ್ಧರಿಸುತ್ತದೆ. ಕ್ರಿಕ್ರಿಶ್ಚಿಯನ್ ಅಡಿ ವಿವಿಧ ಜಾತಿಗಳನ್ನು ನಮೂದಿಸಿದನ್ನು ಆಯೋಗ ಈಗಾಗಲೇ ತೆಗೆದು ಹಾಕಿದೆ ಎಂದು ಸ್ಪಷ್ಟಪಡಿಸಿದರು.
ಗದಗದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಸಲು ಉದ್ದೇಶಿಸಿರುವ ಸಮೀಕ್ಷೆಯು ಕೇವಲ ಜಾತಿ ಗಣತಿಯಾಗಿರದೇ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿದೆ. ಜನರ ಜಾತಿಯ ವಿವರ ಪಡೆಯುವ ಜೊತೆಗೆ ಅವರ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ವಿವರ ಪಡೆದು, ಅವಕಾಶ ವಂಚಿತರಿಗೆ ಸಮಾನ ಅವಕಾಶ ಕಲ್ಪಿಸಲು ಈ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಜಾತಿ ಗಣತಿ ಮಧ್ಯೆಯೇ ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಬಗ್ಗೆ ಪ್ರತಿಕ್ರಿಯಿಸಿ, ‘ಕುರುಬ ಸಮಾಜವನ್ನು ಎಸ್ಟಿಗೆ ಸೇರಿಸುವ ಶಿಫಾರಸನ್ನು ಹಿಂದಿನ ಬಿಜೆಪಿ ಸರ್ಕಾರವೇ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ ಕಳುಹಿಸಿದ್ದು, ಅದಕ್ಕೆ ವಿವರಣೆಯನ್ನು ಸರ್ಕಾರ ನೀಡಲಿದೆ. ಯಾವುದೇ ಸಮುದಾಯವನ್ನು ಎಸ್ಟಿಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.