ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ನಗರದಲ್ಲಿ ನಿರ್ಮಿಸಿರುವಂತ ನೂತನ ಕೆ ಎಸ್ ಆರ್ ಟಿ ಸಿ ಘಟಕವನ್ನು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಉದ್ಘಾಟಿಸಿದರು. ಈ ಮೂಲಕ ಸಚಿವ ಡಿ.ಸುಧಾಕರ್ ಮತ್ತು ಸಾರ್ವಜನಿಕ ಪ್ರಯಾಣಿಕರ ಬಹುದಿನಗಳ ಬೇಡಿಕೆಯಾದ ಹಿರಿಯೂರು ಘಟಕವನ್ನು ಲೋಕಾರ್ಪಣೆಗೊಳಿಸಿದರು.
ಇಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಹುಳಿಯಾರು ರಸ್ತೆಯಲ್ಲಿರುವ ರೂ. 06 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ನೂತನ ಹಿರಿಯೂರು ಬಸ್ ಘಟಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಳೆದ 2017 ರಲ್ಲಿ ಸಾರಿಗೆ ಸಚಿವನಾಗಿದ್ದಾಗ ದಾವಣಗೆರೆ ಹಾಗೂ ತುಮಕೂರು ವಿಭಾಗದಲ್ಲಿದ್ದ ಚಿತ್ರದುರ್ಗವನ್ನು ಪ್ರತ್ಯೇಕ ವಿಭಾಗವನ್ನಾಗಿ ಪ್ರಾರಂಭಿಸಲು ಅನುಮತಿ ನೀಡಿದ್ದೆ. ಅದರಂತೆ ಚಿತ್ರದುರ್ಗ ವಿಭಾಗವು 2018 ರಿಂದ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಬಸ್ ಘಟಕಗಳನ್ನು ನಿರ್ಮಿಸಲಾಗುತ್ತಿದೆ. ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ನೂತನ ಬಸ್ ಘಟಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈ ಘಟಕಗಳಲ್ಲಿ ಡೀಸೆಲ್ ಪಂಪ್ ನಿರ್ಮಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಇನ್ನೂ ಎರಡು ತಿಂಗಳಲ್ಲಿ ಬಸ್ ಘಟಕ ನಿರ್ಮಾಣದ ಅಂತಿಮ ಕೆಲಸಗಳನ್ನು ಪೂರ್ಣಗೊಳಿಸಿ ಉದ್ಘಾಟಿಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಹಿರಿಯೂರು ಬಸ್ ನಿಲ್ದಾಣ ಹಳೆಯದಾಗಿದ್ದು ಉನ್ನತೀಕರಿಸಲು ರೈತ ಮುಖಂಡರು ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಹಿರಿಯೂರು ಬಸ್ ನಿಲ್ದಾಣ ಉನ್ನತೀಕರಣಕ್ಕೂ ಮಂಜೂರಾತಿ ನೀಡಲಾಗುವುದು. ಸದ್ಯ ಉದ್ಘಾಟಿಸಿರುವ ಹಿರಿಯೂರು ನೂತನ ಬಸ್ ಘಟಕದಲ್ಲಿ ಆಡಳಿತ ಕಚೇರಿ, ಬಸ್‍ಗಳ ನಿರ್ವಹಣೆ ಮತ್ತು ಪರಿವೀಕ್ಷಣೆ ಅಂಕಣ, ಭದ್ರತಾ ಮತ್ತು ಸಂಚಾರ ಶಾಖೆ, ಮಹಿಳಾ ಮತ್ತು ಪುರುಷ ಸಿಬ್ಬಂದಿ ವಿಶ್ರಾಂತಿ ಗೃಹ, ಇಂಧನ ಪಂಪ್, ವಾಷಿಂಗ್ ರ್ಯಾಂಪ್, ಪಾರ್ಕಿಂಗ್ ವ್ಯವಸ್ಥೆ, ಜನರೇಟರ್ ಕೊಠಡಿ, ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಚಿತ್ರದುರ್ಗ ವಿಭಾಗದಲ್ಲಿ 358 ಬಸ್‍ಗಳು ಇದ್ದು, 924 ಚಾಲನಾ, 225 ತಾಂತ್ರಿಕ ಹಾಗೂ 194 ಆಡಳಿತ ಸೇರಿ 1343 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶಕ್ತಿ ಯೋಜನೆ ಜಾರಿಯಿಂದ ಇಲ್ಲಿಯವರಗೆ ಚಿತ್ರದುರ್ಗ ವಿಭಾಗದ ಬಸ್‍ಗಳಲ್ಲಿ 5.48 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಸಿದ್ದಾರೆ. ಪ್ರತಿ ದಿನ ರಾಜ್ಯ ಸಾರಿಗೆ ಬಸ್‍ಗಳಲ್ಲಿ 55 ರಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಿದ್ದು, ಇಲ್ಲಿಯವರೆಗೆ ಒಟ್ಟು 512 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಸಾರಿಗೆಯ ಲಾಭ ಪಡೆದಿದ್ದಾರೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಮೊಳಕಾಲ್ಮೂರು ಹಾಗೂ ಹೊಳಲ್ಕೆರೆ ನೂತನ ಬಸ್ ಘಟಕಗಳ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಈ ಘಟಕಗಳಲ್ಲಿ ಡೀಸೆಲ್ ಪಂಪ್ ನಿರ್ಮಿಸಲು ಜಿಲ್ಲಾಧಿಕಾರಿಗಳು ಅನುಮತಿ ನೀಡಿದ್ದಾರೆ. ಇನ್ನೂ ಎರಡು ತಿಂಗಳಲ್ಲಿ ಬಸ್ ಘಟಕ ನಿರ್ಮಾಣದ ಅಂತಿಮ ಕೆಲಸಗಳನ್ನು ಪೂರ್ಣಗೊಳಿಸಿ ಉದ್ಘಾಟಿಸುವುದಾಗಿ ತಿಳಿಸಿದರು.
ಹಿರಿಯೂರು ಬಸ್ ನಿಲ್ದಾಣ ಹಳೆಯದಾಗಿದ್ದು ಉನ್ನತೀಕರಿಸಲು ಸಚಿವ ಡಿ.ಸುಧಾಕರ್‌ರವರು ಮತ್ತು ರೈತ ಮುಖಂಡರು ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಹಿರಿಯೂರು ಬಸ್ ನಿಲ್ದಾಣ ಉನ್ನತೀಕರಣಕ್ಕೂ ಮಂಜೂರಾತಿ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವರಾದ ಸುಧಾಕರ್ ಅವರು ಹಿರಿಯೂರು ತಾಲ್ಲೂಕಿನ ಧರ್ಮಪುರದಲ್ಲಿ ರೂ.3.5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಬೇಡಿಕೆ ಸಲ್ಲಿಸಿದ್ದು, ಶೀಘ್ರವೇ ಮಂಜೂರಾತಿ ನೀಡುವುದಾಗಿ ಸಾರಿಗೆ ಹಾಗೂ ಮುಂಜರಾಯಿ ಸಚಿವ ರಾಮಲಿಂಗಾರೆಡ್ಡಿ ಘೋಷಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯೋಜನೆ ಮತ್ತು ಸಾಂಖ್ಯಿಕ ಸಚಿವ ಹಾಗು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ವಹಿಸಿದ್ದರು.
ಹಿರಿಯೂರು ಕೆ ಎಸ್ ಆರ್ ಟಿ ಸಿ ಘಟಕದ ಸೌಲಭ್ಯಗಳು
ಬಸ್ಸುಗಳ ನಿರ್ವಹಣಾ ಅಂಕಣ
ಬಸ್ಸುಗಳ ಪರಿವೀಕ್ಷಣ ಅಂಕಣ
ಭದ್ರತಾ ಮತ್ತು ಸಂಚಾರ ಶಾಖೆ
ಮಹಿಳಾ ಮತ್ತು ಪುರುಷ ವಿಶ್ರಾಂತಿ ಗೃಹ, ಶೌಚಾಲಯಗಳು,ಇಂಧನ ಕೊಠಡಿ, ವಾಷಿಂಗ್ ರಾಂಪ್, ಪಾರ್ಕಿಂಗ್ ವ್ಯವಸ್ಥೆ, ಜನರೇಟರ್ ಕೊಠಡಿ ಗಳಿವೆ.
ಕಾರ್ಯಕ್ರಮದ ಸಂದರ್ಭದಲ್ಲಿ ಮಾನ್ಯ ಸಾರಿಗೆ ಸಚಿವರು ಹಿರಿಯೂರು-ಧರ್ಮಸ್ಥಳ, ಹಿರಿಯೂರು-ಚಳ್ಳಕೆರೆ, ಹಿರಿಯೂರು-ಹೊಸದುರ್ಗ, ಹಿರಿಯೂರು-ಹಾಸನ, ಹಿರಿಯೂರು-ಧರ್ಮಪುರ ಮಾರ್ಗದ ನೂತನ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಎಸ್ ನವೀನ್, ಕರ್ನಾಟಕ ದ್ರಾಕ್ಷಾರಸ ಮಂಡಳಿಯ ಅಧ್ಯಕ್ಷ ಡಾ.ಬಿ ಯೋಗೀಶ್ ಬಾಬು, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ ಎಸ್ ಮಂಜುನಾಥ್, ಹಿರಿಯೂರು ನಗರಸಭೆ ಅಧ್ಯಕ್ಷರಾದಂತ ಬಾಲಕೃಷ್ಣ ಆರ್, ಚಿತ್ರದುರ್ಗ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಶಿವಣ್ಣ ಆರ್, ಕೆ ಎಸ್ ಆರ್ ಟಿ ಸಿ ನಿಗಮದ ಹಿರಿಯ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು