ಚಿತ್ರದುರ್ಗ : ಕಾಡುಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಚಿತ್ರದುರ್ಗದ ಶ್ರೀ ಕ್ಷೇತ್ರ ಗೊಲ್ಲಗಿರಿ ಮಠದ ಶ್ರೀ ಕೃಷ್ಣ ಯಾದವನಂದ ಸ್ವಾಮಿಜಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಟಿಬಿ ಗೊಲ್ಲರಹಟ್ಟಿ ಗ್ರಾಮದ ಶ್ರೀ ಈರಲಿಂಗೇಶ್ವರ ಸ್ವಾಮಿ ದೇವರ ನೂತನ ದೇವಸ್ಥಾನ ನಿರ್ಮಾಣದ ಅಡಿಪಾಯ ಪೂಜೆ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ನಮ್ಮ ಸಮುದಾಯವು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದು, ಸಮುದಾಯದ ಶೈಕ್ಷಣಿಕ ಅಭಿವೃದ್ಧಿಗೆ ಮೀಸಲಾತಿ ಅವಶ್ಯಕತೆಯಿದೆ. ಈಗಾಗಲೇ ಮೀಸಲಾತಿಗಾಗಿ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದೇವೆ. ಕಾಡುಗೊಲ್ಲ ಕಡತಗಳಲ್ಲಿ ತೊಡಕುಂಟಾಗಿರುವ ಲೋಪದೋಷಗಳನ್ನು ಸರಿಪಡಿಸಿ ರಾಜ್ಯ ಸರ್ಕಾರ, ಕಡತವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ, ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದರು.
ದೇಶದ ಪರಂಪರೆಯಲ್ಲಿ ದೇವಸ್ಥಾನಗಳಿಗೆ ತನ್ನದೇ ಆದಂತಹ ಸ್ಥಾನಮಾನವಿದೆ. ಅದರಲ್ಲೂ ಕೂಡ ಕಾಡುಗೊಲ್ಲರು ಅನಾದಿಕಾಲದಿಂದಲೂ ದೇವರುಗಳಿಗೆ ಅತ್ಯಂತ ಭಕ್ತಿ ಮತ್ತು ಗೌರವದಿಂದ ನಡೆಸಿಕೊಂಡು ಬರುತ್ತಿದ್ದಾರೆ. ನಾವು ಸಾಂಸ್ಕೃತಿಕ ವೀರರನ್ನೇ ದೇವರನ್ನಾಗಿ ಆಧಾರಧಿಸುವ ಪದ್ದತಿ ರೂಢಿಯಲ್ಲಿದೆ. ನಾವು ಕಲೆಯಲ್ಲಿ ಶ್ರೀಮಂತಿಕೆ ಹೊಂದಿದ್ದೇವೆ. ಟಿಬಿ ಗೊಲ್ಲರಹಟ್ಟಿ ಗ್ರಾಮದ ಈರಣ್ಣ ಸ್ವಾಮಿ ದೇವರಿಗೆ ಆದಿ ಪೂಜೆ ನೆರವೇರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ವೇಗವಾಗಿ ಆರಂಭಗೊಂಡು, ದೇವಾಲಯ ಪೂರ್ಣಗೊಂಡು ಲೋಕಾರ್ಪಣೆಯಾಗಲಿ ಆ ಭಗವಂತ ಎಲ್ಲರಿಗೂ ಒಳಿತು ಮಾಡಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೂಡ್ಲಹಳ್ಳಿ ಪಾರ್ಥಲಿಂಗೇಶ್ವರ ದೇವರ ಪೂಜಾರಿ ಪೋತರಾಜ್ ಚಿಕ್ಕಣ್ಣ, ಬುಕ್ಕಾಪಟ್ಟಣ ಕ್ಯಾತೆದೇವರ ಪೂಜಾರಿ ದೊಡ್ಡಯ್ಯ, ಮಾಯಸಂದ್ರ ಚಿತ್ರಲಿಂಗೇಶ್ವರ ಪೂಜಾರಿ ಪೂಜಪ್ಪ, ಮ್ಯಾಕ್ಲೂರಹಳ್ಳಿ ಬಾಲಕೃಷ್ಣ ದೇವರ ಪೂಜಾರಿ ರಂಗಪ್ಪ, ಹೊಸಹಟ್ಟಿ ರಂಗನಾಥ ಸ್ವಾಮಿ ಪೂಜಾರಿ ರಂಗಪ್ಪ, ಬ್ಯಾಡರಹಳ್ಳಿ ಪೂಜಾರಿ ಗೋಪಾಲಕೃಷ್ಣ, ಓಣಿಹಟ್ಟಿ ಪೂಜಾರಿ ಯಳಿಯಪ್ಪ, ರಂಗನಾಥನ ಪೂಜಾರಿ ಲಕ್ಷ್ಮಣಪ್ಪ, ಮಸ್ಕಲ್ ಚಿತ್ರದೇವರ ಪೂಜಾರಿ ನಿಜಲಿಂಗಪ್ಪ, ಜೋಗಯ್ಯನಪಾಳ್ಯ ಶನಿದೇವರ ಪೂಜಾರಿ ಮಹಾಲಿಂಗಯ್ಯ, ದೇವರಕೊಟ್ಟ ದತ್ತಪೀಠದ ಮುದ್ದರಂಗಪ್ಪಸ್ವಾಮಿ, ಮಸ್ಕಲ್ ವೀರೇಗೌಡ್ರು, ಧನಂಜಯ, ಮಲ್ಲಣ್ಣ, ಪೂಜಾರಿ ನರಸಿಂಹಣ್ಣ, ವೆಂಕಟೇಶ್ , ಶಿರಾದ ತಾವರೆಕೆರೆ ಗೊಲ್ಲರಹಟ್ಟಿಯ ಅಣ್ಣತಮ್ಮಂದಿರು, ಮಸ್ಕಲ್, ಚಿತ್ರದೇವರಹಟ್ಟಿ ಹಾಗೂ ಟಿಬಿ ಗೊಲ್ಲರಹಟ್ಟಿ ಗ್ರಾಮಸ್ಥರು, ಕಾಡುಗೊಲ್ಲರ ಕಟ್ಟೆಮನೆಗಳ ಅಣ್ಣತಮ್ಮಂದಿರು ಹಾಗೂ ನೆಂಟರು ಸೇರಿದಂತೆ ಸುತ್ತಮುತ್ತಲಿನ ಭಕ್ತರು ಪೂಜೆಯಲ್ಲಿ ಭಾಗಿಯಾಗಿದ್ದರು.
‘ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ’ದ ಪದಾಧಿಕಾರಿಗಳ ಚುನಾವಣೆ: ಅಂತಿಮ ಕಣದಲ್ಲಿ ‘ಐವರು ಅಭ್ಯರ್ಥಿ’ಗಳು