ಚಾಮರಾಜನಗರ : ಧರ್ಮಸ್ಥಳದಲ್ಲಿ ಶವ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್ ಆದಂತ ಚಿನ್ನಯ್ಯನ 2ನೇ ಹೆಂಡತಿ ಪ್ರತಿಕ್ರಿಯೆ ನೀಡಿದ್ದು, ನನ್ನ ಗಂಡ ಒಳ್ಳೆಯವರು, ಅವರ ಬಂಧನ ವಿಷಯ ಟಿವಿ ಮೂಲಕವೇ ತಿಳಿಯಿತು. ಚಿನ್ನಯ್ಯ ಒಳ್ಳೆಯವರು, ನಾವು ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿಲ್ಲ ಎಂದು ಧರ್ಮಸ್ಥಳ ಪ್ರಕರಣದಲ್ಲಿ ಬಂಧಿತನಾಗಿರುವ ಚಿನ್ನಯ್ಯನ ಎರಡನೇ ಪತ್ನಿ ಮಲ್ಲಿಕಾ ಹೇಳಿದರು.
ತಮಿಳುನಾಡಿನ ಸತ್ಯಮಂಗಲಂ ತಾಲೂಕಿನ ಗ್ರಾಮವೊಂದರಲ್ಲಿ ಮಾತನಾಡಿದ ಅವರು, ಮೊದಲನೇ ಪತ್ನಿ ತೊರೆದು 6 ವರ್ಷದ ಬಳಿಕ ಅವರು ನನ್ನನ್ನು ವಿವಾಹವಾಗಿದ್ದರು. ವಿವಾಹದ ಸಂದರ್ಭದಲ್ಲಿ ಧರ್ಮಸ್ಥಳದ ಮ್ಯಾನೇಜರ್ ಒಬ್ಬರು ಚಿನ್ನಯ್ಯ ಒಳ್ಳೆಯವನು ಎಂದು ಲೆಟರ್ ಕೂಡ ಕೊಟ್ಟಿದ್ದರು. ನಾನೂ ಕೂಡ ಚಿನ್ನಯ್ಯನ ಜೊತೆ ಧರ್ಮಸ್ಥಳದಲ್ಲಿ ಸ್ವಚ್ಛ ಕಾರ್ಮಿಕಳಾಗಿ ಕೆಲಸ ನಿರ್ವಹಿಸುತ್ತಿದ್ದೆ ಎಂದರು.
ಬಳಿಕ, ಧರ್ಮಸ್ಥಳದ ಕೆಲಸ ಬಿಟ್ಟು ತಮಿಳುನಾಡಿನಲ್ಲಿ 8 ವರ್ಷಗಳಿಂದ ವಾಸವಿದ್ದು ಕಳೆದ 2 ತಿಂಗಳಿನ ಹಿಂದೆ ಕೆಲಸಕ್ಕೆಂದು ಹೋದವರನ್ನು ಟಿವಿಯಲ್ಲೇ ನಾನು ನೋಡಿದ್ದು ಎಂದು ಕಣ್ಣೀರಿಟ್ಟರು. ನನ್ನ ಗಂಡ ಯಾವ ತಪ್ಪೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡರು.
ಕ್ರೈಸ್ತ ಧರ್ಮಕ್ಕೆ ಮತಾಂತರವಾದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಧರ್ಮಸ್ಥಳ ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಮೇಲೆ ಆಣೆ ಮಾಡಿ ಹೇಳುತ್ತೇವೆ, ನಾವು ಮತಾಂತರ ಆಗಿಲ್ಲ. ಅಲ್ಲಿದ್ದಷ್ಟು ದಿನ ಮಂಜುನಾಥನಿಗೆ ಕೈ ಮುಗಿಯುತ್ತಿದ್ದೆವು. ಈಗ ಬಣ್ಣಾರಿ ಅಮ್ಮನ್ನನ್ನು ಪೂಜಿಸುತ್ತಿದ್ದೇವೆ ಎಂದರು.