ಬೆಂಗಳೂರು: ಚೀನಾ ಮೂಲದ ಲೋನ್ ಕಂಪನಿಗಳಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಇಡಿ ಅಧಿಕಾರಿಗಳು(ಜಾರಿ ನಿರ್ದೇಶನಾಲಯ) ನಗರದ 5 ಕಡೆ ದಾಳಿ ಮಾಡಿ 78 ಕೋಟಿ ಹಣ ಜಪ್ತಿ ಮಾಡಿದ್ದಾರೆ.
ಸಿಐಡಿ ಸೈಬರ್ ಕ್ರೈಂ ವಿಭಾಗದಲ್ಲಿ 18 FIR ದಾಖಲಾಗಿದ್ದವು. ಕೇಸ್ ಆಧಾರದ ಮೇಲೆ ತನಿಖೆ ನಡೆಸಿದಾಗ ಎಲ್ಲಾ ಲೋನ್ ಆ್ಯಪ್ ಗಳ ಮೂಲ ಚೀನಾವೆಂದು ಪತ್ತೆಯಾಗಿತ್ತು. ಭಾರತೀಯ ಮೂಲದ ಉದ್ಯೋಗಿಗಳನ್ನೇ ಕಂಪನಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು. ಕಡಿಮೆ ಸಾಲ ನೀಡಿ ಅಧಿಕ ಬಡ್ಡಿ ವಸೂಲಿ ಮಾಡಿ ಗ್ರಾಹಕರಿಗೆ ಕಿರುಕುಳ ನೀಡಲಾಗುತ್ತಿತ್ತು. ವಸೂಲಿಯಾದ ಹಣವನ್ನ ಅಕ್ರಮವಾಗಿ ವಿದೇಶಿ ಖಾತೆಗಳಿಗೆ ವರ್ಗಾಯಿಸಲಾಗುತ್ತಿತ್ತು. ಸದ್ಯ ಇಡಿ ಅಧಿಕಾರಿಗಳು ದಾಳಿ ನಡೆಸಿ 78 ಕೋಟಿ ಹಣ ಜಪ್ತಿ ಮಾಡಿದ್ದಾರೆ.
ಮತ್ತೊಂದು ಚೀನಿ ಕಂಪನಿಯ ಮೇಲೆ ಇಡಿ ದಾಳಿ
ಕೆಲ ತಿಂಗಳ ಹಿಂದೆ ಉದ್ಯೋಗದ ಭರವಸೆ ಕೊಟ್ಟು ಯುವಕರಿಂದ ಹಣ ಸಂಗ್ರಹಿಸಿ ವಂಚಿಸುತ್ತಿದ್ದ ಚೀನಾ ಮೂಲದ ‘ಕೀಪ್ಶೇರ್’ ಆ್ಯಪ್ಗೆ ಸೇರಿದ 12 ಕೇಂದ್ರಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ₹ 5.88 ಕೋಟಿ ನಗದು ಹಾಗೂ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಆ್ಯಪ್ ವಿರುದ್ಧ ಬೆಂಗಳೂರು ದಕ್ಷಿಣ ವಿಭಾಗದ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪಾರ್ಟ್ಟೈಮ್ ಕೆಲಸ ಕೊಡುವುದಾಗಿ ಯುವಕರನ್ನು ಆಕರ್ಷಿಸುತ್ತಿದ್ದ ‘ಕೀಪ್ಶೇರ್’ ಆ್ಯಪ್, ಸಾಕಷ್ಟು ಜನರನ್ನು ವಂಚಿಸಿತ್ತು. ಚೀನಾ ಮೂಲದ ವ್ಯಕ್ತಿಗಳು ಭಾರತೀಯರನ್ನೇ ನಿರ್ದೇಶಕರನ್ನಾಗಿಸಿ ಭಾರತದ ವಿವಿಧೆಡೆ ಒಂದಿಷ್ಟು ಕಚೇರಿಗಳನ್ನು ತೆರೆದಿದ್ದರು. ಈ ಕಚೇರಿಗಳ ಟೆಲಿಕಾಲರ್ಗಳು ಯುವಕರಿಗೆ ಗಾಳ ಹಾಕಿ ಅವರ ಮಾಹಿತಿ ಸಂಗ್ರಹಿಸಿ, ಉದ್ಯೋಗಕ್ಕಾಗಿ ಹಣದ ಬೇಡಿಕೆ ಇಡುತ್ತಿದ್ದರು. ಸಾಕಷ್ಟು ಮೊತ್ತ ಸಂಗ್ರಹವಾಗುತ್ತಿದ್ದಂತೆ ಕಂಪನಿಯೇ ನಾಪತ್ತೆಯಾಗುತ್ತಿತ್ತು. ಇದರ ಜೊತೆಗೆ ಹೂಡಿಕೆ ಆ್ಯಪ್ಗಳ ಹೆಸರಿನಲ್ಲಿಯೂ ಸಾರ್ವಜನಿಕರಿಂದ ದಾಖಲೆಗಳು ಹಾಗೂ ಹಣ ಸಂಗ್ರಹಿಸಿರುವ ಬಗ್ಗೆಯೂ ತನಿಖೆ ವೇಳೆ ತಿಳಿದುಬಂದಿತ್ತು.