ಶಿವಮೊಗ್ಗ : ಕಾರ್ಮಿಕರ ಮಕ್ಕಳು ಉನ್ನತ ಸ್ಥಾನಕ್ಕೆ ಹೋಗಬೇಕು. ವೈದ್ಯ, ಇಂಜಿನಿಯರ್ ಸೇರಿದಂತೆ ಉನ್ನತ ಹುದ್ದೆಗಳಿಗೆ ತಮ್ಮ ಮಕ್ಕಳನ್ನು ಕಳಿಸುತ್ತೇವೆ ಎನ್ನುವ ಸಂಕಲ್ಪ ಕಾರ್ಮಿಕರು ಕೈಗೊಳ್ಳಬೇಕು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ಹೇಳಿದರು.
ಗುರುವಾರದಂದು ಸಾಗರ ನಗರಸಭೆ ಆವರಣದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ಕಾರ್ಮಿಕರಿಗೆ ಟೂಲ್ಸ್ ಕಿಟ್ ಮತ್ತು ಸುರಕ್ಷಾ ಕಿಟ್ ವಿತರಣೆ ಮಾಡಿ ಅವರು ಮಾತನಾಡುತ್ತಾ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡುವ ಮೂಲಕ ಅವರ ಬದುಕು ಹಸನುಗೊಳಿಸಿ ಎಂದರು.
ದೇಶ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರತಿ ನಿರ್ಮಾಣ, ಅಭಿವೃದ್ದಿ ಕೆಲಸದ ಹಿಂದೆ ನಿಮ್ಮ ಶ್ರಮ ಇರುತ್ತದೆ. ಕಾರ್ಮಿಕರ ಶ್ರೇಯೋಭಿವೃದ್ದಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆ ಜಾರಿಗೆ ತಂದಿದೆ. ಅದರ ಸದ್ಭಳಕೆ ಮಾಡಿಕೊಳ್ಳಿ. ಕಾರ್ಮಿಕರಲ್ಲದವರು ಕಾರ್ಮಿಕ ಕಾರ್ಡ್ ಪಡೆದು ನಿಮಗೆ ಸಿಗಬೇಕಾದ ಸೌಲಭ್ಯವನ್ನು ಪಡೆಯುತ್ತಿರುವ ಬಗ್ಗೆ ಗಮನ ಹರಿಸಿ ಎಂದು ಹೇಳಿದರು.
ಸಂತೋಷ್ ಲಾಡ್ ಅವರು ಕಾರ್ಮಿಕ ಸಚಿವರಾದ ಮೇಲೆ ದೊಡ್ಡಮಟ್ಟದ ಸುಧಾರಣೆ ಇಲಾಖೆಯಲ್ಲಿ ಆಗಿದೆ. ಕುಟುಂಬ ಪಿಂಚಣಿ, ದುರ್ಬಲತೆ ಪಿಂಚಣಿ, ಹೆರಿಗೆಗೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ, ಮದುವೆಗೆ ಸಹಾಯಧನ ಸೇರಿ ಅನೇಕ ಸೌಲಭ್ಯ ನೀಡಲಾಗುತ್ತಿದೆ. ಇದರ ಬಗ್ಗೆ ಅಧಿಕಾರಿಗಳು ಕಾರ್ಮಿಕರಿಗೆ ಸರಿಯಾದ ಮಾಹಿತಿ ನೀಡಿ. ಯೋಜನೆ ಅರ್ಹ ಕಾರ್ಮಿಕರಿಗೆ ತಲುಪದ ಇರಬಾರದು. ಕಾರ್ಮಿಕರು ಕಡ್ಡಾಯವಾಗಿ ವಿಮೆ ಮಾಡಿಸಿಕೊಳ್ಳುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು. ಕಾರ್ಮಿಕ ಸಂಘಟನೆಗಳು ಒಗ್ಗಟ್ಟಾಗಿರಬೇಕು ಎಂದರು.
ವೇದಿಕೆಯಲ್ಲಿ ವಿಲ್ಸನ್ ಗೋನ್ಸಾಲ್ವಿಸ್, ರವೀಂದ್ರ ಸಾಗರ್, ಸುರೇಶಬಾಬು, ಗಣಪತಿ ಮಂಡಗಳಲೆ, ಸೋಮಶೇಖರ ಲ್ಯಾವಿಗೆರೆ, ಕಲಸೆ ಚಂದ್ರಪ್ಪ, ಗುರುಮೂರ್ತಿ, ಮಕ್ಬೂಲ್ ಅಹ್ಮದ್, ಪೌರಾಯುಕ್ತ ಎಚ್.ಕೆ.ನಾಗಪ್ಪ. ಶಿಲ್ಪ ಉಪಸ್ಥಿತರಿದ್ದರು.
ಮಂಡ್ಯದಲ್ಲಿ ಕೃಷಿ ವಿವಿ ಗೆ ತೀವ್ರ ವಿರೋಧವಾಗಿತ್ತು ನಾನು ಆಗಲೇಬೇಕು ಅಂದಾಗ ಎಲ್ಲರು ಸುಮ್ಮನಾದ್ರು: ಸಿಎಂ ಸಿದ್ದರಾಮಯ್ಯ
ನಾನು, ಸತೀಶ್ ಜಾರಕಿಹೊಳಿ ಭೇಟಿಯಾಗಿದ್ದು ನಿಜ: ಡಿಸಿಎಂ ಡಿ.ಕೆ. ಶಿವಕುಮಾರ್








