ವಿಜಯಪುರ : ಆಟವಾಡುತ್ತಾ ಆಯತಪ್ಪಿ ಕೊಳವೆ ಬಾವಿಗೆ ಎರಡು ವರ್ಷದ ಬಾಲಕ ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಕ್ಷಣ ಗ್ರಾಮದಲ್ಲಿ ನಡೆದಿದ್ದು ಇದೀಗ ಬಾಲಕನ ರಕ್ಷಣಾ ಕಾರ್ಯ ಆಚರಣೆಗೆ ಕಲ್ಲುಬಂಡೆ ಅಡ್ಡಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ.
ನಿನ್ನೆ ಜಮೀನಿನಲ್ಲಿ ಶಂಕರಪ್ಪ ಮುಜಗೊಂಡ ಬೋರ್ವೆಲ್ ಕೊರೆಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದ್ರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದ. ಇದೀಗ ಶಂಕರಪ್ಪ ಮುಜಗೊಂಡ ಮೊಮ್ಮಗ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸುಮಾರು 15ರಿಂದ 20 ಅಡಿ ಆಳದಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದ್ದು, ಇದೀಗ ಆ್ಯಕ್ಸಿಜನ್ ವ್ಯವಸ್ಥೆ ಮಾಡಲಾಗಿದೆ.
ಇನ್ನು ವಿಷಯ ತಿಳಿದಯುತ್ತಿದ್ದಂತೆಯೇ ಸ್ಥಳದಲ್ಲಿ ಜನರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇತ್ತ ಸಾತ್ವಿಕ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಬೋರ್ವೆಲ್ ಪಕ್ಕದಲ್ಲಿ 2 JCB ಮೂಲಕ ಹಳ್ಳ ತೆಗೆಯುವ ಕಾರ್ಯ ನಡೆದಿದೆ. ಮಗುವಿನ ರಕ್ಷಣೆಗೆ ಬೆಳಗಾವಿಯಿಂದ ಶ್ರೀಶೈಲ್ ಚೌಗಲಾ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ತಂಡ(ಎಸ್ಡಿಆರ್ಎಫ್ ) ಸಹ ಘಟನಾ ಸ್ಥಳಕ್ಕೆ ಆಗಮಿಸಿದೆ. ಇನ್ನು ಸ್ಥಳಕ್ಕೆ ವಿಜಯಪುರ ಜಿಲ್ಲಾ ಪಂಚಾಯಿತಿ ಸಿಇಒ, ಎಸ್ಪಿ ಭೇಟಿ ನೀಡಿ ರಕ್ಷಣಾ ಕಾರ್ಯಚರಣೆಯನ್ನು ಪರಿಶೀಲನೆ ನಡೆಸಿದ್ದಾರೆ.
ಮಗುವಿನ ರಕ್ಷಣಾ ಕಾರ್ಯಕ್ಷಣೆಗೆ ಈ ವೇಳೆ ಬಂಡೆಗಳು ಅಡ್ಡಿಯಾಗಿದ್ದು ಬಂಡೆ ಸಿಕ್ಕಿದ್ದರಿಂದ ರಕ್ಷಣಾ ವಿಳಂಬವಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಕಲ್ಲು ಬಂಡೆ ಅಡ್ಡಿಯಾಗಿ ಇರುವುದರಿಂದ ಇದೀಗ ಸಿಬ್ಬಂದಿಗಳು ಕೈಯಿಂದ ನೆಲ ಆಗೇಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.ಈ ವೇಳೆ ಕ್ಯಾಮರಾದಲ್ಲಿ ಮಗು ಕಾಲು ಅಲುಗಾಡಿಸುತ್ತಿರುವುದು ಕೂಡ ಕಂಡು ಬಂದಿದೆ.ಹೀಗಾಗಿ ಶೀಘ್ರವೇ ಮಗುವನ್ನು ಹೊರತೆಗೆಯುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಸತತ 12 ಗಂಟೆಗಳ ಕಾಲ ಕಾರ್ಯಚರಣೆ ನಡೆಸುತ್ತಿದ್ದು ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು ಸಾತ್ವಿಕ್ ಸಾವನ್ನು ಗೆದ್ದು ಬರಲಿ ಎಂದು ಇಡೀ ಕರುನಾಡು ಕಾಯುತ್ತಿದೆ