ಚಿಕ್ಕಮಗಳೂರು: ನಿನ್ನೆ ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಗಣಪತಿ ಮೂರ್ತಿ ತರಲು ಹೋಗುವಾಗ ಟಾಟಾ ಏಸ್ ಪಲ್ಟಿಯಾಗಿ ಇಬ್ಬರು ಯುವಕರು ಮೃತಪಟ್ಟಿದ್ದು, ಘಟನೆಗೆ ಸಂಬಂಧಿಸಿದಂತೆ ಮೃತರ ಕಣ್ಣುಗಳನ್ನು ದಾನ ಮಾಡಲು ಅವರ ಪೋಷಕರು ನಿರ್ಧರಿಸಿದ್ದು, ಇದರಿಂದ ನಾಲ್ವರು ಅಂಧರಿಗೆ ಮೃತ ಯುವಕರು ಬೆಳಕಾಗಿದ್ದಾರೆ.
ಹೌದು ಅಪಘಾತದಲ್ಲಿ ಲಿಂಗದಹಳ್ಳಿ ಗ್ರಾಮದ ಶ್ರೀಧರ (20 ವರ್ಷ) ಮತ್ತು ಧನುಷ್ (17 ವರ್ಷ) ಸ್ಥಳದಲ್ಲೇ ಮೃತಪಟ್ಟಿದ್ದರು. ಇತರ ಮೂವರು ಗಂಭೀರ ಗಾಯಗೊಂಡಿದ್ದರು. ಮೃತ ಯುವಕರ ಪೋಷಕರು ತಮ್ಮ ಮಕ್ಕಳ ಕಣ್ಣುಗಳನ್ನು ದಾನ ಮಾಡಲು ನಿರ್ಧರಿಸಿದ್ದು, ತರೀಕೆರೆ ಆಸ್ಪತ್ರೆಯ ವೈದ್ಯರ ನೆರವಿನಿಂದ ಕಣ್ಣುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ.
ವೈದ್ಯರ ಸಲಹೆ ಮೇರೆಗೆ ಯುವಕರ ಪೋಷಕರಾದ ಕುಬೇಂದ್ರ- ಪದ್ಮಾ ಮತ್ತು ರಮೇಶ್-ಶೋಭಾ ಅವರು ತಮ್ಮ ಮಕ್ಕಳ ಕಣ್ಣುಗಳನ್ನು ದಾನ ಮಾಡಿದ್ದಾರೆ. ಇದರಿಂದ ನಾಲ್ವರು ಅಂಧರಿಗೆ ದೃಷ್ಟಿ ದೊರಕಿದಂತಾಗುತ್ತದೆ ಎಂದು ತರೀಕೆರೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ದೇವರಾಜು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ?
ಟಾಟಾ ಏಸ್ ವಾಹನದಲ್ಲಿ ಗಣಪತಿ ತರಲು ತೆರಳುತ್ತಿದ್ದ ವೇಳೆ ಪಲ್ಟಿ ಆಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ದುರ್ಘಟನೆ ನಡೆದಿದೆ. 9 ಜನ ಯುವಕರಿದ್ದ ವಾಹನ ಅಪಘಾತಕ್ಕೀಡಾಗಿದೆ.
ಶ್ರೀಧರ್ (20) ಹಾಗೂ ಧನುಷ್ (20) ಮೃತ ಯುವಕರಾಗಿದ್ದಾರೆ. ಅಪಘಾತದಲ್ಲಿ ಮತ್ತಿಬ್ಬರು ಯುವಕರ ತಲೆಗೆ ಗಂಭೀರ ಗಾಯಗಳಾಗಿದ್ದು, ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆ ರವಾನಿಸಲಾಗಿದೆ. ಅಲ್ಲದೇ ವಾಹನದಲ್ಲಿದ್ದ ಇತರ ಮೂವರು ಯುವಕರಿಗೂ ಹೆಚ್ಚಿನ ಗಾಯಗಳಾಗಿದೆ. ಅವರನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.