ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತ ನಡೆದಿದ್ದು, ಅಡ್ಡ ಬಂದ ನಾಯಿಯನ್ನು ತಪ್ಪಿಸಲು ಹೋಗಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮದುವೆ ಆಗಬೇಕಿದ್ದ ಯುವಕ ಗಂಭೀರ ಗಾಯಗೊಂಡಿದ್ದು, ತಾಯಿ ಮೃತಪಟ್ಟ ಘಟನೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ಮಂಚೇನಹಳ್ಳಿ ತಾಲೂಕಿನ ಸವಿತಾ ಎಂದು ಗುರುತಿಸಲಾಗಿದೆ. ಅಲಕಾಪುರ ಬಳಿ ಮಂಗಳವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ.ಅಪಘಾತದಲ್ಲಿ ತಾಯಿ ಸವಿತಾ ಸ್ಥಳದಲ್ಲೇ ಮೃತಪಟ್ಟಿದ್ದು, ಮಗ ಕುಶಾಲ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ಕುಶಾಲ್ಗೆ ವಾರದ ಹಿಂದೆಯಷ್ಟೇ ಬಿಶ್ಚಿತಾರ್ಥವಾಗಿದ್ದು, ಡಿಸೆಂಬರ್ನಲ್ಲಿ ಮದುವೆ ಮಾಡಲು ದಿನ ಫಿಕ್ಸ್ ಮಾಡಲಾಗಿತ್ತು. ಇವರು ಗೌರಿಬಿದನೂರಿನ ಪಾಂಡುರಂಗ ಜ್ಯುವೆಲರಿ ಅಂಗಡಿ ಮಾಲೀಕರಾಗಿದ್ದು, ಅಂಗಡಿಗೆ ಬೇಕಾಗಿದ್ದ ವಸ್ತುಗಳ ಖರೀದಿಗೆ ಬೆಂಗಳೂರಿಗೆ ಹೋಗಿದ್ದರು. ನಂತರ ವಾಪಸ್ ಬರುವ ವೇಳೆ ಘಟನೆ ನಡೆದಿದೆ.ಮಂಚೇನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.