ಚಿಕ್ಕಬಳ್ಳಾಪುರ : ತನ್ನ ಪತ್ನಿಯು ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆಕೆಯ ಶೀಲ ಶಂಕಿಸಿ ಪತಿಯೊಬ್ಬ ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸೋಣೆಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಮುನಿರೆಡ್ಡಿ (60) ತನ್ನ ಮೊದಲನೇ ಪತ್ನಿ ಪದ್ಮಮ್ಮ (50)ಳನ್ನು ಮಚ್ಚಿನಿಂದ ಭೀಕರವಾಗಿ ಕೊಲೆ ಮಾಡಿದ್ದಾನೆ.ಮೃತ ಪದ್ಮಮ್ಮ ಅವರು ಜಮೀನು ವಿವಾದ ಸಂಬಂಧ ಕೋರ್ಟ್ನಲ್ಲಿ ವ್ಯಾಜ್ಯ ಹೂಡಿದ್ದಾರೆ. ಅಲ್ಲದೆ ತನ್ನ ಪತ್ನಿ ಅದೇ ಗ್ರಾಮದ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮುನಿರೆಡ್ಡಿ ಮತ್ತು ಅವರ ಮಗ ಇಬ್ಬರೂ ಸೇರಿ ಪದ್ಮಮ್ಮಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ಮೂಗಳು ತಿಳಿಸಿವೆ.
ಕೊಲೆ ಮಾಡಿದ ನಂತರ ಆರೋಪಿಗಳು ತಾವೇ ಪೊಲೀಸರಿಗೆ ಶರಣಾಗಿದ್ದಾರೆ. ಕೊಲೆ ಪ್ರಕರಣದ ಹಿನ್ನೆಲೆ ಗ್ರಾಮದಲ್ಲಿ ಆತಂಕ ಮೂಡಿದೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಸಂಬಂಧ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.