ಚಿಕ್ಕಬಳ್ಳಾಪುರ : ಸಮಾಜದಲ್ಲಿ ಎಂತೆಂತಹ ಮಕ್ಕಳು ಇರ್ತಾರೆ ನೋಡಿ, ವೃದ್ಧ ತಾಯಿಗೆ ಬರುತ್ತಿದ್ದ ಪಿಂಚಣಿ ಹಣ ಹಂಚಿಕೆ ವಿಚಾರಕ್ಕೆ ಮೂವರು ಸಹೋದರರ ನಡುವೆ ಜಗಳವಾಗಿದ್ದು, ವಿಕೋಪಕ್ಕೆ ತಿರುಗಿ ಅಣ್ಣನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ನಡೆದಿದೆ.
ನರಸಿಂಹಮೂರ್ತಿ (45) ಕೊಲೆಯಾದ ಸಹೋದರ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮೇಳ್ಯ ಗ್ರಾಮದಲ್ಲಿ ಘಟನೆ ನಡೆದಿದ್ದು, ಕೊಲೆ ಆರೋಪಿಗಳಾದ ರಾಮಾಂಜಿ (39) ಮತ್ತು ಗಂಗಾಧರಪ್ಪ (39) ಎಂಬವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಗೌರಿಬಿದನೂರು ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ.
ಕೊಲೆಯಾದ ನರಸಿಂಹಮೂರ್ತಿ ಮತ್ತು ಆರೋಪಿಗಳಾದ ರಾಮಾಂಜಿ ಹಾಗೂ ಗಂಗಾಧರಪ್ಪ ಒಡಹುಟ್ಟಿದ ಸಹೋದರರು. ಇವರ ತಂದೆ ಹನುಮಂತರಾಯಪ್ಪ ಬೆಸ್ಕಾಂ ಉದ್ಯೋಗಿಯಾಗಿದ್ದರು. ಇವರ ಮರಣದ ನಂತರ ಪತ್ನಿಗೆ ಪಿಂಚಣಿ ಬರುತ್ತಿತ್ತು. ತಾಯಿ ಬಳಿ ಪಿಂಚಣಿ ಹಣ ಹಂಚಿಕೊಳ್ಳುವ ವಿಚಾರಕ್ಕೆ ನಡೆದ ಜಗಳವು ಕೊಲೆಗೆ ಕಾರಣವಾಗಿದೆ.