ಮೈಸೂರು : ಮೈಸೂರಿನಲ್ಲಿ ನಡೆದ ರಾಜಕೀಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಪಾಲ್ಗೊಂಡಿದ್ದಾರೆ.
ಮೈಸೂರಿನಲ್ಲಿ ನಡೆದ ರಾಜಕೀಯ ಮುತ್ಸದ್ದಿ ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬೇರೆ ಪಕ್ಷಗಳಲ್ಲಿದ್ದರೂ ನನ್ನ ಹಾಗೂ ಶ್ರೀನಿವಾಸ್ ಪ್ರಸಾದ್ರ ನಡುವೆ ಉತ್ತಮ ಸ್ನೇಹ ಬಾಂಧವ್ಯ ಹಾಗೂ ಒಡನಾಡವಿತ್ತು. ಪರಸ್ಪರ ರಾಜಕೀಯ ವೈರುಧ್ಯಗಳಿದ್ದರೂ ನಮ್ಮ ಸ್ನೇಹಕ್ಕೆ ಎಂದೂ ಧಕ್ಕೆ ಬಂದಿರಲಿಲ್ಲ.
ಮೊದಲು ಜನತಾ ದಳ ಪಕ್ಷದಿಂದ ಶ್ರೀನಿವಾಸ್ ಪ್ರಸಾದ್ ರವರು ಲೋಕಸಭೆ ಹಾಗೂ ನಂತರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷವನ್ನು ಸೇರಿದ ಶ್ರೀನಿವಾಸ್ ಪ್ರಸಾದ್ ಹಾಗೂ ನಾನು ಬೇರೆ ಪಕ್ಷಗಳಲ್ಲಿದ್ದರೂ ನಮ್ಮಲ್ಲಿ ಪರಸ್ಪರ ಸ್ನೇಹ ಹಾಗೂ ಗೌರವಗಳಿದ್ದವು. ಅವರು ವಿವಿಧ ಪಕ್ಷಗಳಲ್ಲಿ ಹಲವು ನಾಯಕರೊಂದಿಗೆ ಒಡನಾಟವನ್ನು ಹೊಂದಿದ್ದರು. ಮನುಷ್ಯತ್ವದಿಂದ ಕೂಡಿದ ಸಜ್ಜನರು. ಅವರು ಯಾವುದೇ ಪಕ್ಷದಲ್ಲಿದ್ದರೂ, ಡಾ. ಅಂಬೇಡ್ಕರ್ ರವರ ವಿಚಾರಧಾರೆಗಳ ನೈಜ ಅನುಯಾಯಿಯಾಗಿದ್ದರು ಎಂದರು.
ಅವಕಾಶ ವಂಚಿತರಿಗೆ ಜಾತ್ಯತೀತವಾಗಿ ಸಮಾನ ಅವಕಾಶವನ್ನು ನೀಡಬೇಕೆಂಬುದನ್ನು ಬಲವಾಗಿ ನಂಬಿ, ಸಂವಿಧಾನದ ಆಶಯಗಳನ್ನು ಪಾಲಿಸಿಕೊಂಡು ಬಂದಿದ್ದರು. ಬುದ್ಧ, ಬಸವಣ್ಣ, ಗಾಂಧೀಜಿಯವರ ವಿಚಾರಧಾರೆಗಳನ್ನು ನಂಬಿ ನಡೆಯುವವರು ಬದುಕಿನುದ್ದಕ್ಕೂ ಮನುಷ್ಯತ್ವವನ್ನು ಪಾಲಿಸುವವರಾಗಿರುತ್ತಾರೆ. ಮನುಷ್ಯ ಮನುಷ್ಯನನ್ನು ಪರಸ್ಪರ ಗೌರವಿಸಬೇಕೇ ಹೊರತು ದ್ವೇಷಿಸಬಾರದು. ರಾಜಕೀಯ ವೈರುಧ್ಯಗಳಿಂದಾಗಿ ಪರಸ್ಪರ ಟೀಕಿಸುವುದು ಸ್ವಾಭಾವಿಕವಾಗಿದ್ದರೂ, ನಮ್ಮ ಸ್ನೇಹಕ್ಕೆಂದೂ ಧಕ್ಕೆ ಬಂದಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಪಡೆದ ನಂತರ, ನನ್ನ ಕೆಲವು ಶಾಸಕಮಿತ್ರರೊಂದಿಗೆ ಅವರನ್ನು ಭೇಟಿ ಮಾಡಿದ್ದೆ. ಅವರೊಂದಿಗಿನ ಅರ್ಧ ಗಂಟೆಯ ಭೇಟಿಯಲ್ಲಿ ನಮ್ಮ ಹಿಂದಿನ ಸ್ನೇಹ ಮರುಕಳಿಸಿತ್ತು. ನಮ್ಮ ನಡುವೆ ಯಾವುದೇ ರಾಜಕೀಯ ಮಾತುಕತೆ ನಡೆಯಲಿಲ್ಲ. ಆದರೆ ಶ್ರೀನಿವಾಸ್ ಪ್ರಸಾದ್ ಅವರು ರಾಜಕೀಯದ ಕೊನೆ ದಿನಗಳಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ ಬಂದಿತ್ತು ಎಂದು ಹೇಳಿದ್ದರು.