ಆಯುಷ್ ಸಚಿವಾಲಯದ(Ministry of Ayush)ಅಡಿಯಲ್ಲಿ “ದೇಶ್ ಕಾ ಪ್ರಕೃತಿ ಪರೀಕ್ಷಣ್ ” ಎಂಬ ಅಭಿಯಾನವನ್ನು ರೂಪಿಸಿದ್ದು,ಇದರಿಂದ ಪ್ರತಿಯೊಬ್ಬ ವ್ಯಕ್ತಿಗೂ ಆಯುರ್ವೇದ ಆಧಾರಿತ ಜೀವನ ಶೈಲಿಯನ್ನು ರೂಢಿಸಿಕೊಳ್ಳಲು ಪ್ರೇರಣೆಯಾಗಲಿದೆ.ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯೊಂದಿಗೆ ಮತ್ತು ಆಯುಷ್ ರಾಜ್ಯ ಸಚಿವರಾದ (Union minister of state, IC) ಶ್ರೀ ಪ್ರತಾಪ್ ರಾವ್ ಜಾಧವ್ ರವರ ಮಾರ್ಗದರ್ಶನದೊಂದಿಗೆ ಈ ರಾಷ್ಟ್ರೀಯ ಅಭಿಯಾನವನ್ನು ಭಾರತೀಯ ವೈದ್ಯಕೀಯ ಪದ್ಧತಿಯ ರಾಷ್ಟ್ರೀಯ ಆಯೋಗ ( NCISM) ನಿರ್ವಹಿಸುತ್ತಿದೆ.
ಪ್ರಕೃತಿ ಎಂದರೇನು?
ಪ್ರಕೃತಿ: ಶರೀರ ಸ್ವಭಾವಂ || (ಅಷ್ಟಾಂಗ ಹೃದಯ) ಪ್ರಕೃತಿ ಮಿತಿ ಸ್ವಭಾವಂ || (ಚರಕ).
ಪ್ರಕೃತಿ ಎಂದರೆ ಶರೀರದ ಸ್ವಭಾವ.ಹೀಗಾಗಿ ಮನುಷ್ಯನ ಸ್ವಭಾವ,ಸ್ವರೂಪ ಮತ್ತು ಗುಣಗಳು ಒಬ್ಬರಿಗಿಂತ ಒಬ್ಬರಲ್ಲಿ ವಿಭಿನ್ನವಾಗಿರುತ್ತದೆ.ಆಯುರ್ವೇದದಲ್ಲಿ ವಾತ, ಪಿತ್ತ ಮತ್ತು ಕಫ ಎಂಬ ತ್ರಿದೋಷಗಳನ್ನು ತಿಳಿಸಿದ್ದು ಹುಟ್ಟಿನಿಂದ ಮರಣದವರೆಗೆ ಪ್ರಾಕೃತಾವಸ್ಥೆಯಲ್ಲಿನ ಮತ್ತು ಬದಲಾಯಿಸಲಾಗದ ದೋಷಗಳ (unchangeable dosic dominance)ಪ್ರಾಧಾನ್ಯತೆಯೇ ಪ್ರಕೃತಿ.
ಪ್ರಕೃತಿಯ ರಚನೆ ಮತ್ತು ನಿರ್ಣಯ.
ಪ್ರಕೃತಿಯು ಗರ್ಭಧಾರಣೆಯ ಸಮಯದಲ್ಲಿಯೇ ವೀರ್ಯಾಣ ಮತ್ತು ಅಂಡಾಣುವಿನಲ್ಲಿರುವ ದೋಷಗಳ ಪ್ರಾಬಲ್ಯತೆಯ ಆಧಾರಿಸಿ ನಿರ್ಣಯವಾಗುತ್ತದೆ. ಈ ಪ್ರಕೃತಿಯು ಎಲ್ಲರಲ್ಲೂ ಒಂದೇ ರೀತಿಯಲ್ಲಿ ಇರದೇ ಭಿನ್ನವಾಗಿರುತ್ತದೆ.ಮನುಷ್ಯನ ದೈಹಿಕ ಸ್ವರೂಪ, ಮಾನಸಿಕ ಸ್ಥಿತಿ ಮತ್ತು ದೇಹದಲ್ಲಿನ ಚಟುವಟಿಕೆಗಳಿಂದ ಪ್ರಕೃತಿಯನ್ನು ನಿರ್ಧರಿಸಲಾಗುತ್ತದೆ.
ಪ್ರಕೃತಿಯ ವಿಧಗಳು ಹಾಗೂ ಲಕ್ಷಣಗಳು :
ಮುಖ್ಯವಾಗಿ ಎರಡು ವಿಧಗಳು
1.ದೈಹಿಕ ಪ್ರಕೃತಿ.
2.ಮಾನಸಿಕ ಪ್ರಕೃತಿ
ದೈಹಿಕ ಪ್ರಕೃತಿಯಲ್ಲಿ ಏಳು ವಿಧ ವಾತ,ಪಿತ್ತ, ಕಫ, ವಾತ-ಪಿತ್ತ, ವಾತ-ಕಫ,ಪಿತ್ತ-ಕಫ ಮತ್ತು ಸನ್ನಿಪಾತಜ ಅಥವಾ ಸಮಪ್ರಕೃತಿ. ಮಾನಸಿಕ ಪ್ರಕೃತಿಯಲ್ಲಿ ಮೂರು ವಿಧ ಸಾತ್ವಿಕ, ರಾಜಸಿಕ ಹಾಗೂ ತಾಮಸಿಕ. ಪ್ರತಿಯೊಂದು ವಿಧವಾದ ಪ್ರಕೃತಿಯು ತನ್ನದೇ ಆದ ಗುಣ ಲಕ್ಷಣಗಳನ್ನು ಹೊಂದಿದೆ. ಉದಾಹರಣೆಗೆ ವಾತಪ್ರಕೃತಿಯುಳ್ಳವರು ಅತಿಯಾದ ಮಾತುಗಾರಿಕೆ,ಚಂಚಲ ಮನಸ್ಸು, ಕಡಿಮೆ ಕೂದಲು ಮತ್ತು ನೋಡಲು ತೆಳ್ಳಗಿರುತ್ತಾರೆ.
ಪಿತ್ತ ಪ್ರಕೃತಿಯುಳ್ಳವರು ಬುದ್ಧಿಶಾಲಿಗಳು,ತುಂಬಾ ಬೆವರುವಿಕೆ ಹಾಗೂ ಅಕಾಲದಲ್ಲಿ ಕೂದಲುಗಳು ಬಿಳಿಯಾಗುವುದು, ಮುಂತಾದ ಲಕ್ಷಣಗಳನ್ನು ಹೊಂದಿರುತ್ತಾರೆ. ಕಫ ಪ್ರಕೃತಿಯುಳ್ಳ ಉಳ್ಳವರು ನೋಡಲು ಸ್ವಲ್ಪ ದಪ್ಪವಾಗಿರುವರು,ಹೆಚ್ಚಿನ ಶಕ್ತಿಯನ್ನು ಹೊಂದಿರುವವರು, ಕಡಿಮೆ ಚಟುವಟಿಕೆಗಳನ್ನು ಮಾಡುವರು ಮತ್ತು ಅಲ್ಪಭಾಷಿತರು ಆಗಿರುತ್ತಾರೆ. ಹೀಗೆಯೇ ಒಂದೇ ಪ್ರಕೃತಿ ಅಥವಾ ಸಮಪ್ರಕೃತಿ ಉಳ್ಳವರು ಅಸಾಮಾನ್ಯ.ಬಹುತೇಕ ಜನರು ದ್ವಂದ್ವಜ ಪ್ರಕೃತಿ (ಎರಡು ಪ್ರಕೃತಿ)ಉಳ್ಳವರಾಗಿರುತ್ತಾರೆ.
ಪ್ರಕೃತಿ ಮತ್ತು ರೋಗಗಳ ಸಂಬಂಧ
ಪ್ರಕೃತಿಗೆ ಸಮವಾಗಿರುವ ಗುಣಗಳ ಆಹಾರ ಪದಾರ್ಥಗಳನ್ನು ಯಥೇಚ್ಛವಾಗಿ ಬಳಸುವುದರಿಂದ ಆಯಾ ದೋಷಗಳು ವೃದ್ಧಿ ಹೊಂದಿ,ಸಂಬಂಧಿತ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತದೆ. ಉದಾಹರಣೆಗೆ ವಾತಪ್ರಕೃತಿಯುಳ್ಳವರು ವಾತ ದೋಷದಿಂದ ಉಂಟಾಗುವ ರೋಗಗಳು ಅಂದರೆ ಸಂಧಿವಾತ( Arthritis),ಇಮ್ಮಡಿ ಹೊಡೆಯುವುದು(Cracked foot), ನರಗಳ ತೊಂದರೆ (Nerve disorders) ,ಪಕ್ಷಾಗಾತ (Paralysis),ನಿದ್ದೆಯ ತೊಂದರೆ(Sleep disorders) ಮುಂತಾದವುಗಳಿಂದ ಬಳಲುವ ಸಾಧ್ಯತೆ ಹೆಚ್ಚು.
ಪಿತ್ತ ಪ್ರಕೃತಿ ಉಳ್ಳವರು ಪಿತ್ತದೋಷದಿಂದ ಉಂಟಾಗುವ ರೋಗಗಳು ಅಂದರೆ ಸೋರಿಯಾಸಿಸ್/ ಚರ್ಮದ ಕಾಯಿಲೆಗಳು, ಜಾಂಡೀಸ್, ಬಾಯಲ್ಲಿಹುಣ್ಣು(Stomatitis), ಅಸಿಡಿಟಿ ಮುಂತಾದ ತೊಂದರೆಗಳಿಗೀಡಾಗಬಹುದು. ಕಫ ಪ್ರಕೃತಿ ಉಳ್ಳವರು ಕಫ ದೋಷದಿಂದ ಉಂಟಾಗುವ ರೋಗಗಳು ಅಂದರೆ ಬೊಜ್ಜು(Obesity),ಅತಿಯಾದ ನಿದ್ರೆ, ಅಜೀರ್ಣ(Indigestion), ಅರುಚಿ(Anorexia) ಮುಂತಾದವುಗಳಿಂದ ಬಳಲಬಹುದು.
ನಿಮ್ಮ ಪ್ರಕೃತಿಯನ್ನು ತಿಳಿದುಕೊಳ್ಳುವದರಿಂದ ಆಗುವ ಪ್ರಯೋಜನಗಳು.
1.ಆಯುರ್ವೇದ ವೈದ್ಯರು ರೋಗದ ಪರೀಕ್ಷೆ ಮತ್ತು ಪ್ರತಿಯೊಬ್ಬ ರೋಗಿಯ ಪ್ರಕೃತಿಯನ್ನು ಒಳಗೊಂಡಂತೆ ಮುಂತಾದ ಪರೀಕ್ಷೆಯನ್ನು ಪರೀಕ್ಷಿಸಿದ ನಂತರವೇ ಔಷಧಿ ಅಥವಾ ಚಿಕಿತ್ಸೆಯನ್ನು ನೀಡುತ್ತಾರೆ.
2.ಅವರವರ ಪ್ರಕೃತಿಗೆ ಅನುಗುಣವಾಗಿ ವೈಯಕ್ತಿಕ ಆಹಾರ ಮತ್ತು ವಿಹಾರಗಳನ್ನು ರೂಢಿಸಿಕೊಳ್ಳಬಹುದು.(Personalised diet ®imen) .
3.ಆರೋಗ್ಯದ ನಿರ್ವಹಣೆಗೆ(Health maintaince)ನೀಲಿ ನಕ್ಷೆಯನ್ನು ಒದಗಿಸುತ್ತದೆ.
4. Personalised medicine -ಆಯುರ್ವೇದ ಚಿಕಿತ್ಸಾ ಕ್ರಮವೂ ಎಲ್ಲರಿಗೂ ಒಂದೇ ರೀತಿಯಲ್ಲಿರದೇ, ರೋಗಿಯ ಪ್ರಕೃತಿ ಹಾಗೂ ಮುಂತಾದ ಅಂಶಗಳನ್ನು ಆಧಾರಿಸಿ ನಿರ್ಧರಿಸಲಾಗುತ್ತದೆ.
ಹೀಗಾಗಿ ಎಲ್ಲರೂ ತಮ್ಮ ಪ್ರಕೃತಿಯನ್ನು ಪರೀಕ್ಷಿಸಿ ಕೊಂಡು, ಆಯುರ್ವೇದ ಆಧಾರಿತ ಜೀವನ ಶೈಲಿಯನ್ನು ರೂಪಿಸಿಕೊಳ್ಳಿ.
ಈ ಅಭಿಯಾನವು ನವೆಂಬರ್ 26ರಿಂದ ಪ್ರಾರಂಭವಾಗಿದ್ದು, ಡಿಸೆಂಬರ್ 25ರಂದು ಮುಕ್ತಾಯಗೊಳ್ಳುತ್ತದೆ.ಸಾರ್ವಜನಿಕರು ನಿಮ್ಮ ಪ್ರಕೃತಿಯನ್ನು ಪರೀಕ್ಷಿಸಿಕೊಳ್ಳಲು ನಿಮ್ಮ ಹತ್ತಿರದ ಆಯುರ್ವೇದ ವೈದ್ಯರನ್ನು , ಆಯುರ್ವೇದ ಕಾಲೇಜನ್ನು ಅಥವಾ ಆಯುರ್ವೇದ ಪದವಿಯ ವಿದ್ಯಾರ್ಥಿಗಳನ್ನು ಸಂಪರ್ಕಿಸಬಹುದು.
ದೈನಂದಿನ ಆರೋಗ್ಯ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಸೇರಲು 8660885793 ವಾಟ್ಸಾಪ್ ಸಂದೇಶವನ್ನು ಕಳುಹಿಸಿ.
(ಕಡ್ಡಾಯವಾಗಿ ವಾಟ್ಸಾಪ್ ಮಾತ್ರ).
ಲೇಖಕರು
ಡಾ. ಪ್ರವೀಣ್ ಕುಮಾರ್.ಜಿ
ಆಯುರ್ವೇದ ವೈದ್ಯರು.
8660885793 (ವಾಟ್ಸಾಪ್ ಮಾತ್ರ).