ಬೆಂಗಳೂರು: ಇನ್ನು ಮುಂದೆ ಆಸ್ತಿ ಅಥವಾ ದಾಖಲೆಗಳನ್ನು ನೋಂದಣಿ ಮಾಡುವ ಮುಂಚೆ ಎಚ್ಚರದಿಂದಿರಿ. ಏಕೆಂದರೆ ಆಸ್ತಿ ಮಾರಾಟ ಅಥವಾ ಇತರೆ ದಾಖಲೆಗಳನ್ನು ನೋಂದಣಿ ಮಾಡುವ ಮುನ್ನ ಅಂತಹ ದಾಖಲೆ ಸಲ್ಲಿಸುವ ವ್ಯಕ್ತಿಯ ಆಧಾರ್ ಅಧಿಕೃತತೆ ಪರಿಶೀಲಿಸಬೇಕು ಎಂದು ಹೈಕೋರ್ಟ್, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರಿಗೆ ಆದೇಶಿಸಿದೆ.
ರಾಜೇಶ್ ತಿಮ್ಮಣ್ಣ ಉಮ್ರಾಣಿ ಎನ್ನುವವರು ಅನಾಮಧೇಯ ವ್ಯಕ್ತಿ ಮಾರಾಟ ಮಾಡಿದ್ದಾರೆಂಬ ಆಧಾರದ ಮೇಲೆ ನನ್ನ ಭೂಮಿಯ ಋಣಭಾರ ಪತ್ರದಲ್ಲಿ (ಇಸಿ) ನೋಂದಾಯಿಸಿರುವ ಹೆಸರು ತೆಗೆಯುವಂತೆ ಕೋರಿದ್ದ ಮನವಿಯನ್ನು ಸಬ್ ರಿಜಿಸ್ಟಾರ್ ತಿರಸ್ಕರಿಸಿದ್ದಾರೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.
ಆಧಾರ್ ನಿರ್ದಿಷ್ಟ ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ವಿತರಣೆ ಕಾಯ್ದೆ- 2016ರ ಪ್ರಕಾರ ಯುಐಡಿಎಐನೊಂದಿಗೆ ನೋಂದಣಿ ಮಾಡಿಕೊಂಡಿರುವ ಯಾವುದೇ ಸೇವಾ ಪೂರೈಕೆದಾರರು ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಆಧರಿಸಿ ಅದರ ಅಧಿಕೃತತೆಯನ್ನು ಪರಿಶೀಲಿಸಿಕೊಳ್ಳಬೇಕಿದೆ. ಪರಿಶೀಲನೆ ನಂತರವೇ ನೋಂದಣಿ ಮಾಡಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.