ರಾಮನಗರ : ಸದ್ಯ ರಾಜ್ಯದಲ್ಲಿ ಕೆಲವು ಕ್ಷೇತ್ರಗಳ ಉಪಚುನಾವಣೆ ನಡೆಯಲಿದ್ದು, ಅದರಲ್ಲೂ ಚನ್ನಪಟ್ಟಣ ಉಪಚುನಾವಣೆ ತೀವ್ರ ಪೈಪೋಟಿ ನೀಡಿದೆ. ಈಗಾಗಲೇ ಮೈತ್ರಿ ಪಕ್ಷಗಳು ಸಿದ್ಧತೆ ಮಾಡಿಕೊಂಡಿದ್ದು, ಇನ್ನೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕೆ ಇಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ಮಧ್ಯ ಅಭ್ಯರ್ಥಿ ಆಯ್ಕೆಯ ವಿಚಾರ ಹೈಕಮಾಂಡಿಗೆ ಬಿಟ್ಟಿದ್ದು ಎಂದು ಜೆಡಿಎಸ್ ಯುವಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.
ಇಂದು ಚನ್ನಪಟ್ಟಣ ತಾಲೂಕಿನ ದೊಡ್ಡಮಳೂರು ಗ್ರಾಮದ ಸಾಯಿ ಮಂದಿರದಲ್ಲಿ ಆಯೋಜಿಸಲಾಗಿದ್ದ ಉಚಿತ ಗಣೇಶ ಮೂರ್ತಿ ವಿತರಣಾ ಸಮಾರಂಭದಲ್ಲಿ ಭಾಗಿಯಾಗಿ ಯುವಕರಿಗೆ ಗೌರಿ- ಗಣೇಶ ಮೂರ್ತಿಯನ್ನು ವಿತರಿಸಿ, ಮಾಧ್ಯಮಗಳೊಂದಿಗೆ ಮಾತನಾಡಿದ, ಅವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಜ್ಜಾಗಬೇಕು. ಈಗಾಗಲೇ ಕ್ಷೇತ್ರದ ಹಲವೆಡೆ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿದ್ದೇನೆ. ಎಲ್ಲರ ಅಭಿಪ್ರಾಯಗಳನ್ನು ವರಿಷ್ಠರಿಗೆ ತಲುಪಿಸುವ ಕೆಲಸವಾಗುತ್ತಿದ್ದು, ಟಿಕೆಟ್ ವಿಚಾರವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅವರು, ಈಗಾಗಲೇ ದೆಹಲಿಯಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಬಿಜೆಪಿಯ ಹಿರಿಯ ವರಿಷ್ಠರ ಜತೆಗೂ ಕೂಡ ಚರ್ಚೆ ಮಾಡಲಾಗಿದೆ. ಕ್ಷೇತ್ರದಲ್ಲಿ ಆರೋಗ್ಯಕರ ಚುನಾವಣೆ ನಡೆಯಬೇಕು. ಅಭ್ಯರ್ಥಿ ಆಯ್ಕೆ ಬಗ್ಗೆ ಹೈಕಮಾಂಡ್ ನಾಯಕರು ತೀರ್ಮಾನ ಮಾಡುತ್ತಾರೆ. ಅಂತಿಮವಾಗಿ ಎನ್‌ಡಿಎ ಅಭ್ಯರ್ಥಿ ಪರವಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.
ಚನ್ನಪಟ್ಟಣದ ಉಪಚುನಾವಣೆಯಲ್ಲಿ ಅಂತಿಮವಾಗಿ ಗೆಲುವು ಸಾಧಿಸಬೇಕು. ಆ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದಿಂದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಟಿಕೆಟ್ ವಿಚಾರವನ್ನು ಎರಡೂ ಪಕ್ಷಗಳ ಚೌಕಟ್ಟಿನೊಳಗೆ ಕುಳಿತು ಚರ್ಚಿಸಿ ಅಂತಿಮಗೊಳಿಸಲಾಗುತ್ತದೆ. ಈ ಕುರಿತು ಬಹಿರಂಗವಾಗಿ ಹೇಳಿಕೆ ನೀಡುವುದು ಸೂಕ್ತವಲ್ಲ. ಪಕ್ಷದ ಕಾರ್ಯಕರ್ತರ ಜತೆ ಬೆರೆಯುವ ಕೆಲಸ ಮಾಡುತ್ತಿದ್ದೇನೆ. ನಾನೊಬ್ಬ ಕಾರ್ಯಕರ್ತನಾಗಿ ಕೆಲಸ ಮಾಡಬಹುದೇ ಹೊರತು, ನಾನು ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಲು ಆಗುವುದಿಲ್ಲ ಎಂದರು.