ರಾಮನಗರ : ಚನ್ನಪಟ್ಟಣ ಉಪಚುನಾವಣೆಯ ಅಖಾಡದಲ್ಲಿ ಪ್ರಚಾರ ಜೋರಾಗಿದೆ. ಎನ್ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ಅವರ ಧರ್ಮಪತ್ನಿ ರೇವತಿ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
ಹೌದು ಇಂದು ಬೆಳಗ್ಗೆಯಿಂದಲೇ ಚನ್ನಪಟ್ಟಣದ ಬಸ್ ನಿಲ್ದಾಣ ಹಾಗೂ ಪದವಿ ಕಾಲೇಜಿನ ಸಮೀಪ ನಿಖಿಲ್ ಪರವಾಗಿ ರೇವತಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು, ಪಟ್ಟಣದ ಸಾರ್ವಜನಿಕರನ್ನು ಭೇಟಿಯಾದ ರೇವತಿ ಅವರು, ಕರಪತ್ರಗಳನ್ನು ನೀಡಿ ಎನ್ಡಿಎ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು.
ಉಪಚುನಾವಣೆಯಲ್ಲಿ ಗೆಲುವು ಸಾಧಿಸಲೇಬೇಕು ಎಂಬ ಆತ್ಮವಿಶ್ವಾಸದಲ್ಲಿ ಗೌಡರ ಕುಟುಂಬ ಇದೆ. ಹಾಗಾಗಿ ನಿಖಿಲ್ ಅವರು ನಾಮಪತ್ರ ಸಲ್ಲಿಸಿದ ದಿನದಿಂದಲೂ ರೇವತಿ ಅವರೂ ಸಹ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇವರಿಗೆ ಬಿಜೆಪಿ ನಾಯಕರೂ ಸಹ ಸಾಥ್ ನೀಡಿದ್ದಾರೆ.