ಮಂಡ್ಯ : ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಘೋಷಣೆ ಮಾಡಿರುವುದು ಪೂರ್ವ ನಿಯೋಜಿತ ಎಂದು ಮದ್ದೂರು ಕ್ಷೇತ್ರದ ಶಾಸಕ ಕೆ.ಎಂ.ಉದಯ್ ಅಚ್ಚರಿ ಹೇಳಿಕೆ ನೀಡಿದ್ದಾರೆ.
ಮದ್ದೂರು ಪಟ್ಟಣದ ಶಿವಪುರದ ಶಾಸಕರ ಕಛೇರಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಬಗ್ಗೆ ಅವರ ಕುಟುಂಬದಲ್ಲಿ ಈ ಹಿಂದೆಯೇ ತೀರ್ಮಾನವಾಗಿತ್ತು. ಆದ್ರೆ ಜನಗಳ ಸಿಂಪತಿ ಗಿಟ್ಟಿಸಿಕೊಳ್ಳಲು ಈ ರೀತಿಯ ದೊಂಬರಾಟ ಮಾಡ್ತಿದ್ದರು ಎಂದು ಕಿಡಿಕಾರಿದರು.
ಹೀಗಾಗಿ ನನಗೆ ಟಿಕೆಟ್ ಖಚಿತ ಎಂದು ಅರಿತಿದ್ದ ನಿಖಿಲ್ ಕ್ಷೇತ್ರದಾದ್ಯಂತ ಮಿಂಚಿನ ಪ್ರಚಾರ ಕೈಗೊಂಡಿದ್ದರು. ಮೈತ್ರಿ ಅಭ್ಯರ್ಥಿಯಾಗಿ ಯೋಗೇಶ್ವರ್ ಕಣಕ್ಕಿಳಿಸುವುದಾಗಿ ಕಾಟಾಚಾರದ ಮಾತುಗಳನ್ನು ಹೇಳುತ್ತಿದ್ದರು. ಆದ್ರೆ, ದೇವೇಗೌಡ್ರು ಹಾಗೂ ಕುಮಾರಸ್ವಾಮಿಗೆ ಕ್ಷೇತ್ರವನ್ನು ಬಿಟ್ಟು ಕೊಡಲು ಸುತಾರಾಂ ಇಷ್ಟವಿರಲಿಲ್ಲ. ಹೀಗಾಗಿ ಯೋಗೇಶ್ವರ್ ಬಿಜೆಪಿ ತೊರೆಯುವವರೆಗೂ ಕಾಯ್ದುಕೊಂಡಿದ್ದ ಕುಮಾರಸ್ವಾಮಿ ಈಗ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಅವರನ್ನು ಘೋಷಣೆ ಮಾಡಿದ್ದಾರೆ. ಈ ಚುನಾವಣೆಯಲ್ಲೂ ನಿಖಿಲ್ ಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಶಾಸಕ ಉದಯ್ ವ್ಯಂಗ್ಯವಾಡಿದರು.
ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದವು. ಆದರೆ, ಮೈತ್ರಿ ಪಕ್ಷಗಳಲ್ಲಿ ಯೋಗೇಶ್ವರ್ ಗೆ ಟಿಕೇಟ್ ನೀಡುವ ಬಗ್ಗೆ ಗೊಂದಲ ಉಂಟಾಗಿ ಇದರಿಂದ ಬೇಸತ್ತ ಯೋಗೇಶ್ವರ್ ಪಕ್ಷೇತರರಾಗಿ ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ತೀರ್ಮಾನಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳನ್ನು ಮನಗಂಡು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೂಚನೆ ಮೇರೆಗೆ ಮಾಜಿ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಬಾಲಕೃಷ್ಣ, ಹಾಗೂ ನಾನು ಯೋಗೇಶ್ವರ್ ಅವರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುವ ಮೂಲಕ ಅವರನ್ನು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಿ ಉಪ ಚುನಾವಣೆಯಲ್ಲಿ
ಕಣಕ್ಕಿಳಿಸಿದ್ದೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಚಿವರುಗಳು ಅಕ್ಕ ಪಕ್ಕದ ಕ್ಷೇತ್ರದ ಶಾಸಕರು ಒಗ್ಗಟ್ಟಾಗಿ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ಕನಿಷ್ಠ 50 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವ ನಿರೀಕ್ಷೆ ಹೊಂದಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವರದಿ : ಗಿರೀಶ್ ರಾಜ್, ಮಂಡ್ಯ
ಬೆಂಗಳೂರಿನ ಅಕ್ರಮ ಕಟ್ಟಡ ಮಾಲೀಕರು, ನಕ್ಷೆ ಉಲ್ಲಂಘಿಸಿದವರಿಗೆ ಬಿಗ್ ಶಾಕ್: ತೆರವಿಗೆ ‘BBMP ಆದೇಶ’
ರಾಜ್ಯದಲ್ಲೊಬ್ಬ ಅಪರೂಪದ ‘ಡೊಳ್ಳು ಕಲಾವಿದ’: ಇವರ ಸಾಧನೆ ಕೇಳಿದ್ರೆ ‘ನೀವೇ ಶಾಕ್’ ಆಗ್ತೀರಿ