ಬೆಳಗಾವಿ : ಸಿಎಂ ಬದಲಾವಣೆ ಕುರಿತು ರಾಜ್ಯದಲ್ಲಿ ಭಾರಿ ಚರ್ಚೆ ಆಗುತ್ತಿದ್ದು, ಸದ್ಯ ಸಿಎಂ ಕುರ್ಚಿಯ ಮೇಲೆ ರಾಜ್ಯ ಕಾಂಗ್ರೆಸ್ ನಾಯಕರ ಕಣ್ಣು ಬಿದ್ದಿದ್ದು, ಅವರವರ ವೈಯಕ್ತಿಕ ಅಭಿಪ್ರಾಯ ಹೇಳುತ್ತಿದ್ದಾರೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ 135 ಶಾಸಕರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಗಟ್ಟಿಯಾಗಿ ನಿಂತ ಸಂದರ್ಭದಲ್ಲಿ, ಇದೆಲ್ಲಾ ಬಾಲಿಶ. ಈ ವಿಚಾರದಲ್ಲಿ ನಾನು ಹೆಚ್ಚಿಗೆ ಏನೂ ಮಾತನಾಡುವುದಿಲ್ಲ ಎಂದರು.
ಇನ್ನೂ ನಾವೂ ಸಿಎಂ ಸ್ಥಾನದ ಆಕಾಂಕ್ಷಿ ಎಂಬ ಕೈ ನಾಯಕರ ಹೇಳಿಕೆಗೆ ನಾನು ಓರ್ವ ಜವಾಬ್ದಾರಿಯುತ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೇಳುತ್ತಿದ್ದೇನೆ. ನಮ್ಮದು ಶಿಸ್ತಿನ ಪಕ್ಷ. ಪಕ್ಷದ ಹೈಕಮಾಂಡ್ ಮತ್ತು ಶಾಸಕರು ಇದನ್ನು ನಿರ್ಣಯಿಸುತ್ತಾರೆ. ಅಲ್ಲಿ, ಇಲ್ಲಿ, ಗಲ್ಲಿಯಲ್ಲಿ ಮಾತನಾಡುವ ವಿಷಯಗಳು ಇವಲ್ಲ ಎಂದು ಪರೋಕ್ಷವಾಗಿ ತಮ್ಮದೇ ನಾಯಕರಿಗೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟರು.
ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ತಾವಾಗಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿರುವ ಕುರಿತು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ಸದ್ಯಕ್ಕೆ ಆ ಚರ್ಚೆ ಎಲ್ಲಾ ನಗಣ್ಯ. ಮುಡಾ ಹಗರಣದಲ್ಲಿ ಬಿಜೆಪಿಯವರು ಸುಳ್ಳು ದಾಖಲೆ ಹುಟ್ಟಿಸಿ ಏನೋ ಮಾಡುತ್ತಿದ್ದಾರೆ.ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ನಾವೆಲ್ಲ ಅವರ ಜೊತೆಗಿದ್ದೇವೆ. ಬೇರೆ ಏನೇ ಇದ್ದರೂ ಅದನ್ನು ಹೈಕಮಾಂಡ್ ವಿಚಾರ ಮಾಡುತ್ತದೆ.








