ಕೆಎನ್‌ಎನ್‌ಡಿಜಿಲ್‌ಡಟೆಸ್ಕ್: ಮಹಾಶಿವರಾತ್ರಿಯ ಶುಭ ಸಂದರ್ಭದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ತಂಡದವರಿಂದ ಚಂದನ್ ಶೆಟ್ಟಿಯ ವಿಆರ್ ಪೋಸ್ಟರ್ ಮತ್ತು ಮೋಷನ್ ಪೋಸ್ಟರ್ ಅನ್ನು ನಿವೇದಿತಾ ಗೌಡ ಬಿಡುಗಡೆಗೊಳಿಸಿದ್ದಾರೆ. ಅರುಣ್ ಅಮುಕ್ತ ನಿರ್ದೇಶನದ ಈ ಚಿತ್ರದಲ್ಲಿ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವುದು ನಮಗೆಲ್ಲ ತಿಳಿಸಿದೆ. ಈ ನಡುವೆ ವಿಆರ್ ಪೋಸ್ಟರ್ ಮೂಲಕ ಚಂದನ್ ಶೆಟ್ಟಿಯ ಪಾತ್ರ ಪರಿಚಯವಾಗಿದೆ. ಚಂದನ್ ಇಲ್ಲಿ ಕಾಣಿಸಿಕೊಂಡಿರುವ ಗೆಟಪ್ಪಿನ ಸುತ್ತ ಕುತೂಹಲ ಮನೆ ಮಾಡಿದೆ.
ಈ ವಿಆರ್ ಪೋಸ್ಟರ್ (ವರ್ಚುವಲ್ ರಿಯಾಲಿಟಿ ಪೋಸ್ಟರ್ ಅಂತೂ ಈಗಿನ ಜನರೇಷನ್ನಿನ ಹುಡುಗರಿಗೆ ನೇರಾನೇರ ಕನೆಕ್ಟಾಗುವಂತಿದೆ. ಚಂದನ್ ಶೆಟ್ಟಿಯ ಗೆಟಪ್ಪು ಕೂಡಾ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಜೊತೆಗೆ ಇದು ಸೈಬರ್ ಫಂಕ್ ಕಥೆಯನ್ನು ಒಳಗೊಂಡಿರಬಹುದಾ? ಈ ಹಿಂದೆ ಬಿಡುಗಡೆಗೊಂಡಿದ್ದ ಪೋಸ್ಟರಿನಲ್ಲಿ ಕೈಯಲ್ಲಿ ಹಾಕಿ ಸ್ಟಿಕ್ ಹಿಡಿದಿದ್ದ ನಾಲಕ್ಕು ಪಾತ್ರಗಳು ಎದುರುಗೊಂಡಿದ್ದವು. ಚಂದನ್ ಪಾತ್ರ ಕೈಯಲ್ಲಿ ವಿಆರ್ ಅನ್ನು ಹಿಡಿದುಕೊಂಡಿದೆ. ಇದೆಲ್ಲವನ್ನೂ ಕಂಡ ಪ್ರೇಕ್ಷಕರಿಗೆ ಇದೊಂದು ಈ ಕಾಲಮಾನದ ಆವೇಗ ಬಚ್ಚಿಟ್ಟುಕೊಂಡಿರುವ ಕಥೆಯೆಂಬ ವಿಚಾರವನ್ನು ದಾಟಿಸಿದೆ. ಈ ವಿಆರ್ ಪೋಸ್ಟರ್ ಮೂಲಕ ವಿದ್ಯಾರ್ಥಿ ವಿದ್ಯಾರ್ಥಿನಿಯರತ್ತ ದೊಡ್ಡ ಮಟ್ಟದಲ್ಲಿ ಚರ್ಚೆ ಶುರುವಾಗುವಂತಿದೆ.
ಸುಬ್ರಮಣ್ಯ ಕುಕ್ಕೆ ಮತ್ತು ಶಿವಲಿಂಗೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕಾರ್ಯಕಾರಿ ನಿರ್ಮಾಪಕರಾಗಿ ಶ್ರೀಕಾಂತ್ ಜಿ ಕಶ್ಯಪ್, ಕುಮಾರ್ ಗೌಡ ಛಾಯಾಗ್ರಹಣ, ಭರ್ಜರಿ ಚೇತನ್ ಮತ್ತು ವಾಸುಕಿ ವೈಭಣವ್ ಸಾಹಿತ್ಯ, ಪವನ್ ಗೌಡ ಸಂಕಲನ, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಈ ಚಿತ್ರಕ್ಕಿರಲಿದೆ. ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿಶೇಷವೆಂದರೆ, ಇದುವರೆಗೂ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚಂದನ್ ಶೆಟ್ಟಿ ಪಾತ್ರವನ್ನು ಗೌಪ್ಯವಾಗಿಡಲಾಗಿದೆ. ಶಿವರಾತ್ರಿಯಂದು ಚಂದನ್ ಶೆಟ್ಟಿ ಪಾತ್ರ ಪರಿಚಯ ಮಾಡಲಿರೋ ಮೋಷನ್ ಪೋಸ್ಟರ್ ಲಾಂಚ್ ಆಗಿದೆ. ಇದೀಗ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರ ಚಿತ್ರೀಕರಣದ ಅಂತಿಮ ಘಟ್ಟ ತಲುಪಿದ್ದು, ಶೀಘ್ರದಲ್ಲಿ ನಿಮ್ಮ ಮುಂದೆ ಬರಲಿದೆ.