ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಹಗಲು ರಾತ್ರಿ ಎನ್ನದೆ ಇಡೀ ದಿನವಾ ಬಿಟ್ಟುಬಿಡದೇ ಸುರಿದ ಮಳೆಯಿಂದಾಗಿ ಗಡಿಜಿಲ್ಲೆ ಚಾಮರಾಜನಗರದಲ್ಲಿ ಪೊಲೀಸ್ ಠಾಣೆಯನ್ನೂ ಬಿಡದೆ ವರುಣ ಅವಾಂತರ ಸೃಷ್ಟಿಸಿದ್ದಾನೆ. ಯಳಂದೂರು ತಾಲೂಕಿನಲ್ಲಿರುವ ಮಾಂಬಳ್ಳಿ ಪೊಲೀಸ್ ಠಾಣೆಗೆ ನೀರು ನುಗ್ಗಿ ಇಡೀ ಠಾಣೆಯೇ ಜಲಾವೃತವಾಗಿ ದ್ವೀಪದಂತಾಗಿದೆ. ಕಷ್ಟದಲ್ಲಿರುವ ಜನರು ಎನ್ನದೆ ಎಲ್ಲರನ್ನೂ ರಕ್ಷಿಸಲು ತೆರಳುವ ಪೊಲೀಸರಿಗೇ ಮಳೆಯಿಂದ ರಕ್ಷಣೆ ಸಿಗದಂತಾದ ಸ್ಥಿತಿ ನಿರ್ಮಾಣವಾಗಿದ್ದು, ಇಡೀ ಠಾಣೆ ತುಂಬೆಲ್ಲಾ ಮಂಡಿ, ಸೊಂಟದೆತ್ತರಕ್ಜೆ ನಿಂತು ಅವಾಂತರ ಸೃಷ್ಟಿಸಿದೆ.
ಮೊಣಕಾಲುದ್ದ ನಿಂತಿರುವ ನೀರಿನಲ್ಲಿ ಪೊಲೀಸ್ ಕಾನ್ಸ್ಟೆಬಲ್ ಒಬ್ಬರು ಠಾಣೆಯಲ್ಲಿ ಫಜೀತಿ ಅನುಭವಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಸೋಮವಾರ ಸಂಜೆ ಮಳೆ ಹಾನಿ ಪರಿಶೀಲನೆಗೆ ಹೋಗಿ ಅಧಿಕಾರಿಗಳು ಹಳ್ಳದ ನೀರಿನಲ್ಲಿ ಸಿಲುಕಿಕೊಂಡು ಕೊನೆಗೆ ಸ್ಥಳೀಯರಿಂದ ರಕ್ಷಿಸಲ್ಪಟ್ಟ ಘಟನೆ ಚಾಮರಾಜನಗರ ತಾಲೂಕಿನ ಕಣ್ಣೆಗಾಲ – ಆಲೂರು ನಡುವೆ ನಡೆದ ಘಟನೆ ವರದಿಯಾಗಿದೆ. ಸ್ಥಳೀಯರು ನೀರಿನಲ್ಲಿ ಮುಳುಗಿದ ಕಾರಿಗೆ ಹಗ್ಗ ಕಟ್ಟಿ ಎಳೆದು ಅಧಿಕಾರಿಗಳನ್ನು ರಕ್ಷಿಸಿದ್ದಾರೆ. ಎಇಇ ಕಾಂತರಾಜ್, ಎಇ ರಾಜು, ಚಾಲಕ ಮುರುಗೇಶ್ ಅವರನ್ನು ರಕ್ಷಿಸಲಾಗಿದೆ ಎಂದು ತಿಳಿದು ಬಂದಿದೆ. ಇದರೊಟ್ಟಿಗೆ ಸುರಿಯುತ್ತಿರುವ ನಿರಂತರ ಮಳೆಗೆ ಹನೂರು ತಾಲೂಕಿನ ಗುಂಡಾಲ್ ಜಲಾಶಯ ಕೋಡಿ ಬಿದ್ದಿದೆ.