ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ : ಭಾರತೀಯ ಸೇನೆಯಲ್ಲಿ 22 ವರ್ಷಗಳ ಕಾಲ ಸೇವೆಸಲ್ಲಿಸಿ ಸೇವಾ ನಿವೃತ್ತಿಹೊಂದಿ ಸ್ವಗ್ರಾಮಕ್ಕೆ ಮರಳಿದ ಯೋಧರಿಗೆ ಭವ್ಯ ಸ್ವಾಗತ ಕೋರಲಾಯಿತು. ಇಂದು ತಾಯ್ನಾಡು ಚಾಮರಾಜನಗರಕ್ಕೆ ಬಂದಿಳಿದ ನಿವೃತ್ತ ಯೋಧ ಅಂತೋಣಿ ರೂಬಿನ್ ಮೋಸೆಸ್ ಅವರನ್ನು ನಗರದ ಭುವನೇಶ್ವರಿ ವೃತ್ತದಲ್ಲಿ ನಗರದ ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ಸ್ವಾಮಿ ಅಂತೋಣಪ್ಪ ಸಿ., ಶಾಸಕ ಸಿ.ಪುಟ್ಟರಂಗಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯನಿದೇವಿ ಹೂಗುಚ್ಚ ನೀಡಿ ಶಾಲುಹೊದಿಸಿ ಸನ್ಮಾನಿಸಿ ಸ್ವಾಗತಿಸಿ ಬರಮಾಡಿಕೊಂಡರು. ಇದಕ್ಕೂ ಮುನ್ನಾ ನಗರದ ಮೈಸೂರು ರಸ್ತೆಯಲ್ಲಿ ನಗರದ ಸಂತ ಪೌಲರ ದೇವಾಲಯದ ಧರ್ಮಗುರುಗಳಾದ ಸ್ವಾಮಿ ಅಂತೋಣಪ್ಪ ಸಿ. ಅವರ ನೇತೃತ್ವದಲ್ಲಿ ಕುಟುಂಬಸ್ಥರು, ಗೆಳೆಯರು, ಅಭಿಮಾನಿಗಳು ಪಟಾಕಿ ಸಿಡಿಸಿ, ಹೂಗುಚ್ಚ ನೀಡಿ ಅಂತೋಣಿ ರೂಬಿನ್ ಮೋಸೆಸ್ ಅವರನ್ನು ಅದ್ದೂರಿ ಸ್ವಾಗತ ಕೋರಿ ಬರಮಾಡಿಕೊಂಡರು.
ತೆರೆದ ಜೀಪ್ನಲ್ಲಿ ಬೈಕ್ ರ್ಯಾಲಿ ಯೊಂದಿಗೆ ಡಿವಿಯೇಷನ್ ರಸ್ತೆ ಮೂಲಕ ಭುವನೇಶ್ವರಿ ವೃತ್ತ, ಜೋಡಿರಸ್ತೆ ಮೂಲಕ ರಾಮಸಮುದ್ರಕ್ಕೆ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಅಂತೋಣಿ ರೂಬಿನ್ ಮೋಸೆಸ್ ಅವರು ಮಾಲಾರ್ಪಣೆ ಮಾಡಿದರು. ನಂತರ ಜೋಡಿರಸ್ತೆ ಮೂಲಕ ಸಂತಪೌಲರ ದೇವಾಲಯದವರಗೆ ಮೆರವರಣಿಗೆ ಸಾಗಿ ಮುಕ್ತಾಯಗೊಂಡಿತು. ಸಂತ ಪೌಲರ ದೇವಾಲಯದಲ್ಲಿ ಧರ್ಮಗಳು ಪ್ರಾರ್ಥನೆ ಸಲ್ಲಿಸಿದರು. ಅಂತೋಣಿ ರೂಬಿನ್ ಮೋಸೆಸ್ ಅವರು ನಗರದ ಬಿ.ಜೋಸೆಫ್ ಮತ್ತುಜುಲೇನ್ ಅವರ ಪುತ್ರರಾಗಿದ್ದು, ನಿವೃತ್ತ ಮುಖ್ಯ ಶಿಕ್ಷಕ ಜೋಸೆಫ್ ರಾಜು ಅವರ ಅಳಿಯರಾಗಿದ್ದಾರೆ.
ಎಲ್ಲರೂ ದೇಶಾಭಿಮಾನ ಬೆಳಸಿಕೊಳ್ಳಿ :- ಸನ್ಮಾನ ಸ್ವೀಕರಿಸಿದ ನಿವೃತ ಯೋಧ ಅಂತೋಣಿ ರೂಬಿನ್ ಮೋಸೆಸ್ ಮಾತನಾಡಿ, 2000ನೇ ಸಾಲಿನಲ್ಲಿ ಭಾರತೀಯ ಸೇನೆ ಸೇರಿದ್ದು, ಬೆಂಗಳೂರು, ಬೆಳಗಾಂ ಭಾರತದ ಕಾರ್ಗಿಲ್, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ, ರಾಜಸ್ತಾನ, ಗುಜರಾತ್, ನ್ಯೂಡೆಲ್ಲಿ, ಅರುಣಾಚಲ ಪ್ರದೇಶ ಹಾಗೂ ಕರ್ನಾಟಕ ಮುಂತಾದ ಪ್ರದೇಶಗಳಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ತಾಯ್ನಾಡಿಗೆ ಮರಳಿ ಬಂದಿದ್ದೇನೆ ಇದು ತುಂಬಾ ಖುಷಿ ತಂದಿದೆ. ನಿವೃತ್ತಿ ಜೀವನದಲ್ಲಿ ಸುಮ್ಮನೆ ಕೂರದೆ ಏನಾದರೊಂದು ಕೆಲಸ ಮಾಡುವುದಾಗಿ ಇಂಗಿತ ವ್ಯಕ್ತಪಡಿಸಿದರು. ಸೇನೆ ಎಂದರೆ ಭಯಬೇಡ. ಸಾವು ಬಂದರೆ ಅಲ್ಲಿದ್ದರೂ ಬರುತ್ತದೆ. ಅಲ್ಲಿದ್ದರೂ ಬರುತ್ತದೆ. ಇದ್ದು ಸಾಧಿಸುವ ಖುಷಿ ಎಲ್ಲರಲ್ಲೂ ಇರುತ್ತದೆ. ಎಲ್ಲರೂ ದೇಶಸೇವೆ, ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.