ಬೆಂಗಳೂರು: ಸದನದಲ್ಲಿ ಮಾನ್ಯ ರಾಜ್ಯಪಾಲರ ಉಪಸ್ಥಿತಿ ವೇಳೆ ಗೂಂಡಾಗಿರಿ ಪ್ರದರ್ಶನದ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಯ್ಯನವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಆಗ್ರಹಿಸಿದ್ದಾರೆ.ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿನ ಗೂಂಡಾಗಿರಿ ಕೇವಲ ರಸ್ತೆಗಳಿಗೆ ಸೀಮಿತವಾಗಿತ್ತು. ಈಗ ಅದು ಸದನ ಪ್ರವೇಶವನ್ನೂ ಮಾಡಿದೆ ಎಂದು ಆಕ್ಷೇಪಿಸಿದರು.
ಗೌರವಾನ್ವಿತ ರಾಜ್ಯಪಾಲರು ಭಾಷಣ ಓದುವ ಸಂದರ್ಭದಲ್ಲಿ ಕೆಲವು ಸದಸ್ಯರು ಅವರ ಮೇಲೆ ಬಿದ್ದು ಅವರನ್ನು ಥಳಿಸುವ ಹಂತಕ್ಕೂ ಬಂದಿದ್ದುದು ಈಗಾಗಲೇ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ; ಇದನ್ನು ನಾವು ಖಂಡಿಸುತ್ತೇವೆ ಎಂದು ತಿಳಿಸಿದರು. ಈ ಗೂಂಡಾಗಿರಿಯ ಹೊಣೆ ಹೊತ್ತು ಸಿದ್ದರಾಯ್ಯನವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.
ಮಾನ್ಯ ರಾಜ್ಯಪಾಲರ ವಿರುದ್ಧ ನೀವು ಕನಿಷ್ಠ ಪ್ರಜ್ಞೆಯೂ ಇಲ್ಲದೇ ಗೂಂಡಾಗಿರಿ ಪ್ರದರ್ಶನ ಮಾಡಿರುವುದು ಅಸಾಂವಿಧಾನಿಕ; ಇದು ಸಂವಿಧಾನ ವಿರೋಧಿ. ಇವತ್ತು ರಾಜ್ಯಪಾಲರ ನಡೆ ಒಕ್ಕೂಟ ವ್ಯವಸ್ಥೆಯ ಪರವಾಗಿದೆ. ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಅವರು ಮಾಡಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ ಎಂದು ತಿಳಿಸಿದರು.
ಈಗಾಗಲೇ ಮಾನ್ಯ ಸಿ.ಟಿ.ರವಿ ಅವರು ಹೇಳಿದ ರೀತಿಯಲ್ಲಿ ಮಾನ್ಯ ಗವರ್ನರ್ ಅವರು ಬಂದು ಭಾಷಣ ಮಾಡುವಾಗ, ಅವರು ತೆರಳುವ ವೇಳೆ ಯಾರೂ ಅಡ್ಡಿಪಡಿಸುವಂತಿಲ್ಲ. ಆ ರೀತಿ ಅಡ್ಡಿ ಪಡಿಸಿದರೆ ಆ ಸದನದ ಸದಸ್ಯರನ್ನು ಆ ಅವಧಿಗೆ ಅಮಾನತು ಮಾಡಬೇಕಾಗುತ್ತದೆ. ಈ ವಿಷಯವನ್ನು ನಾವು ಸದನದಲ್ಲಿ ಮಂಡಿಸುವವರಿದ್ದೇವೆ ಎಂದು ತಿಳಿಸಿದರು.
ಕೇಂದ್ರದ ವಿರುದ್ಧವಾಗಿ ನೀವು ಸಂಘರ್ಷಕ್ಕೆ ಅಣಿ ಮಾಡುವ ಕೆಲಸ ಮಾಡಿದ್ದೀರಿ. ಮಾನ್ಯ ಗವರ್ನರ್ ಅವರ ಬೆರಳಿನಿಂದ ಅವರ ಕಣ್ಣನ್ನು ಚುಚ್ಚುವಂಥ ರೀತಿಯಲ್ಲಿ ನೀವೇನು ಭಾಷಣದಲ್ಲಿ ಬರೆದಿದ್ದೀರೋ ಅದನ್ನು ಗೌರವಾನ್ವಿತ ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಇದು ಸ್ವಾಗತಾರ್ಹ ಕ್ರಮ ಎಂದು ವಿಶ್ಲೇಷಿಸಿದರು.
ಗೌರವಾನ್ವಿತ ರಾಜ್ಯಪಾಲರು ಬರುವ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಅವರನ್ನು ಗೌರವಪೂರ್ವಕವಾಗಿ ಕರೆತರಬೇಕು; ಅವರು ಹೋಗುವಾಗ ಅದೇ ಗೌರವದಿಂದ ಬೀಳ್ಕೊಡಬೇಕೆಂದು ಸಂವಿಧಾನದಲ್ಲಿದೆ. ಸರಕಾರದ ಸಾಧನೆಗಳು, ಸರಕಾರದ ನೀತಿ- ಸಿದ್ಧಾಂತಗಳು ಮತ್ತು ಭವಿಷ್ಯದಲ್ಲಿ ಮಾಡುವ ಕೆಲಸಗಳನ್ನು ಭಾಷಣದಲ್ಲಿ ತಿಳಿಸಬೇಕಿತ್ತು. ಆದರೆ, ಇವರು ಕೇಂದ್ರದ ವಿರುದ್ಧ ಅಸಾಂವಿಧಾನಿಕವಾಗಿ, ಸಂಘರ್ಷ ಮಾಡುವ ರೀತಿಯಲ್ಲಿ ಪ್ರೇರೇಪಣೆ ಮಾಡಲು ಹೊರಟಿದ್ದರು ಎಂದು ಆಕ್ಷೇಪಿಸಿದರು.
CRIME NEWS: ಬೆಂಗಳೂರಲ್ಲಿ ಪತ್ನಿ ಕೊಂದು ಪತಿ, ಆತನ ಸ್ನೇಹಿತ ಮಾಡಿದ್ದೇನು ಗೊತ್ತಾ?








