ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ಗಳ ಎರಡನೇ ಮುಂದುವರಿದ ಸುತ್ತು ಹಾಗೂ ಎಂಜಿನಿಯರಿಂಗ್ ಇತ್ಯಾದಿ ಯುಜಿಸಿಇಟಿ ಕೋರ್ಸ್‌ಗಳ 3ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಿದ್ದು, ಕಾಷನ್ ಡೆಪಾಸಿಟ್ ಪಾವತಿಸಿ, ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಮಾಡಿಕೊಳ್ಳಲು ಹಾಗೂ ಹೊಸದಾಗಿ ಸೇರಿಸುವುದಕ್ಕೆ ಸೆ.8ರವರೆಗೆ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಸಮಯದ ಅಭಾವ ಇರುವ ಕಾರಣ, ನಿಗದಿತ ಕಾಲ ಮಿತಿಯಲ್ಲೇ ಎಲ್ಲ ಪೋಷಕರು/ವಿದ್ಯಾರ್ಥಿಗಳು ಮುಂಗಡ ಹಣ ಪಾವತಿಸಿ, ಇಚ್ಛೆ/ಆಯ್ಕೆಗಳನ್ನು ದಾಖಲಿಸುವ/ಅದಲು-ಬದಲು ಮಾಡುವ ಕೆಲಸವನ್ನು ಮಾಡಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಸಲಹೆ ನೀಡಿದ್ದಾರೆ.
ಸೀಟ್ ಮ್ಯಾಟ್ರಿಕ್ಸ್‌ಗೆ ಹೊಸದಾಗಿ ಸೇರ್ಪಡೆಯಾದ ಬೆಳಗಾವಿಯ ಜೆಎನ್‌ಎಂಸಿ ಕಾಲೇಜಿನ 12 ವೈದ್ಯಕೀಯ ಸೀಟು ಹಾಗೂ ಮೈಸೂರಿನ ಫರೂಕಿಯ ದಂತ ವೈದ್ಯಕೀಯ ಕಾಲೇಜಿನ 40 ಸೀಟು ಹಾಗೂ ಬಿಜಿಎಸ್ ಗ್ಲೋಬಲ್ ದಂತ ವೈದ್ಯಕೀಯ ಕಾಲೇಜಿನ 50 ಸೀಟುಗಳನ್ನು ಆಸಕ್ತರು ತಮ್ಮ ಇಚ್ಛೆ/ಆಯ್ಕೆಗಳ ಪಟ್ಟಿಗೆ ಹೊಸದಾಗಿ ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ. ಇದಲ್ಲದೆ, ಹಾಲಿ ಇರುವ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಎಂಟು ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 400 ವೈದ್ಯಕೀಯ ಸೀಟುಗಳು ಸೇರ್ಪಡೆಯಾಗಿದ್ದು, ಅವುಗಳನ್ನು ಕೂಡ ಈ ಸುತ್ತಿಗೆ ಪರಿಗಣಿಸಲಾಗುತ್ತದೆ. ಅಲ್ಲದೆ, ಈ ಸರ್ಕಾರಿ ಕಾಲೇಜುಗಳಲ್ಲಿ 25 ಲಕ್ಷ ರೂಪಾಯಿಗೆ ಎನ್‌ಆರ್‌ಐ ಸೀಟುಗಳನ್ನು ಸರ್ಕಾರ ಕೊಟ್ಟಿದ್ದು, ಅರ್ಹ ಎನ್‌ಆರ್‌ಐ ಅಭ್ಯರ್ಥಿಗಳು ಹೊಸದಾಗಿ ಸದರಿ ಕಾಲೇಜುಗಳ ಸೀಟುಗಳಿಗೆ ಇಚ್ಛೆ/ಆಯ್ಕೆಗಳನ್ನು ನಮೂದಿಸಬಹುದು. ಎನ್‌ಆರ್‌ಐ ಅಲ್ಲದ ಅಭ್ಯರ್ಥಿಗಳು ಕೂಡ ಈ ಕಾಲೇಜುಗಳಲ್ಲಿ ʼಕ್ಯೂʼ ಸೀಟುಗಳಿಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಬಹುದು. ಭರ್ತಿಯಾಗದೆ ಉಳಿಯುವ ಎನ್‌ಆರ್‌ಐ ಸೀಟುಗಳನ್ನು “ಕ್ಯೂʼ ಸೀಟುಗಳನ್ನಾಗಿ ಪರಿವರ್ತಿಸಿ, ಹಂಚಿಕೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಯುಜಿಸಿಇಟಿ: ಕಾಷನ್ ಡೆಪಾಸಿಟ್:
ಯುಜಿಸಿಇಟಿ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ 3ನೇ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಎಲ್ಲ ವರ್ಗದ ಅರ್ಹ ಅಭ್ಯರ್ಥಿಗಳು 10 ಸಾವಿರ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸಬೇಕು. ಬಳಿಕ ಇಚ್ಛೆ/ಆಯ್ಕೆಗಳನ್ನು ಅದಲು/ಬದಲು ಮಾಡಿಕೊಳ್ಳುವುದಲ್ಲದೆ, ಹೊಸದಾಗಿಯೂ ಕೋರ್ಸ್‌ಗಳನ್ನು ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಅವರು ವಿವರಿಸಿದ್ದಾರೆ.
ಮೊದಲ ಮತ್ತು ಎರಡನೇ ಸುತ್ತಿನಲ್ಲಿ ಯಾವುದೇ ಸೀಟು ಹಂಚಿಕೆಯಾಗದವರು, 2ನೇ ಸುತ್ತಿನಲ್ಲಿ ಹಂಚಿಕೆಯಾದ ಸೀಟಿಗೆ ಯಾವುದೇ ಛಾಯ್ಸ್ ನೀಡದಿರುವ, 2ನೇ ಸುತ್ತಿನಲ್ಲಿ ಛಾಯ್ಸ್-1 ಅಥವಾ ಛಾಯ್ಸ್-2 ಆಯ್ಕೆ ಮಾಡಿ ಶುಲ್ಕ ಪಾವತಿ ಮಾಡದಿರುವ ಹಾಗೂ ಛಾಯ್ಸ್-3 ದಾಖಲಿಸಿ, ಕಾಷನ್ ಡೆಪಾಸಿಟ್ ಪಾವತಿಸದೇ ಇರುವ ಅಭ್ಯರ್ಥಿಗಳಿಗೆ 3ನೇ ಸುತ್ತಿನಲ್ಲಿ ಕಾಷನ್ ಡೆಪಾಸಿಟ್ ಪಾವತಿಸಿ, ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಸೀಟು ರದ್ದಿಗೂ ಸೆ.8 ಕೊನೆ ದಿನ
ಅಭ್ಯರ್ಥಿಗಳು ತಮಗೆ ಹಂಚಿಕೆಯಾಗಿರುವ ಕಾಲೇಜುಗಳಿಗೆ ಸೇರಿಕೊಂಡಿದ್ದು, ಆ ನಂತರ ಬೇಡ ಎನ್ನುವವರೂ ಸೆ.8ರೊಳಗೆ ಕೆಇಎಗೆ ಖುದ್ದು ಬಂದು ಸೀಟು ರದ್ದುಪಡಿಸಿಕೊಳ್ಳಬೇಕು. ಹಾಗೆ ಮಾಡುವುದರಿಂದ ಸದರಿ ಸೀಟುಗಳನ್ನು ನಂತರದ ಸುತ್ತಿನಲ್ಲಿ ಇತರರಿಗೆ ಹಂಚಿಕೆ ಮಾಡಲು ಅನುಕೂಲವಾಗುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.
ಮೂರನೇ ಸುತ್ತಿನಲ್ಲಿ ಸೀಟು ಹಂಚಿಕೆಯಾದ ನಂತರ ಕಾಲೇಜಿಗೆ ಸೇರುವುದು ಕಡ್ಡಾಯವಾಗಿರುತ್ತದೆ. ಹೀಗಾಗಿ ಅಭ್ಯರ್ಥಿಗಳು ಎಚ್ಚರವಹಿಸಿ, ಕೋರ್ಸ್/ ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಈ ಸುತ್ತಿನಲ್ಲಿ ಹಂಚಿಕೆಯಾದ ಕಾಲೇಜಿಗೆ ಪ್ರವೇಶ ಪಡೆಯದೇ ಇದ್ದಲ್ಲಿ ಪೂರ್ಣ ಶುಲ್ಕವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಲ್ಲದೆ, ಕಾನೂನು ಕ್ರಮ ಕೂಡ ಜರುಗಿಸಲಾಗುತ್ತದೆ ಅವರು ಎಚ್ಚರಿಸಿದ್ದಾರೆ.
ಸರ್ಕಾರಿ ಕಾಲೇಜುಗಳಲ್ಲಿನ ಕೆಲವು ಕೋರ್ಸ್‌ಗಳಿಗೆ ಶುಲ್ಕ ರಿಯಾಯಿತಿ ಕೂಡ ಇದ್ದು, ಅಭ್ಯರ್ಥಿಗಳು ಇಚ್ಛೆ/ಆಯ್ಕೆಗಳನ್ನು ದಾಖಲಿಸುವ ಸಂದರ್ಭದಲ್ಲಿ ಈ ಕುರಿತು ಯೋಚಿಸಬೇಕು ಎಂದು ಅವರು ವಿವರಿಸಿದ್ದಾರೆ.
ಶಾಸಕ ಜನಾರ್ಧನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಸಂಸದ ಸಸಿಕಾಂತ್ ಸೆಂಥಿಲ್
ಸಂಚಾರ ನಿಯಮ ಉಲ್ಲಂಘನೆಯ 10 ಕೇಸ್ ದಂಡ ಪಾವತಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ